ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗಬಹುದು ಅನ್ನೋ ಭೀತಿ ಈಗ ಶುರುವಾಗಿದೆ. ಹಾಗಾಗಿ ಭಾರತದಲ್ಲಿ ಕೂಡ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ಕೊಡಲಾಗ್ತಿದೆ. 18 ವರ್ಷ ಮೇಲ್ಪಟ್ಟವರೆಲ್ಲ ಮೂರನೇ ಡೋಸ್ ತೆಗೆದುಕೊಳ್ಳಬಹುದು.
ಇದರಿಂದ ಕೊರೊನಾ ವೈರಸ್‌ನಿಂದ ಬರುವ ಅಪಾಯವನ್ನು ತಡೆಗಟ್ಟಬಹುದು. ಈಗಾಗಲೇ ತೆಗೆದುಕೊಂಡಿರುವ ಡೋಸ್‌ಗಳ ಪರಿಣಾಮ ಕ್ರಮೇಣ ಕಡಿಮೆಯಾಗುತ್ತ ಬರುವುದರಿಂದ ಬೂಸ್ಟರ್ ಡೋಸ್ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಮುನ್ನ ಕೆಲವೊಂದು ಎಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಬೇಕು. ನೀವೇನಾದ್ರೂ ಅನಾರೋಗ್ಯದಿಂದ ಬಳಲುತ್ತಿದ್ರೆ ಲಸಿಕೆ ದಿನಾಂಕವನ್ನು ಸದ್ಯಕ್ಕೆ ರದ್ದುಗೊಳಿಸಿ, ಅಥವಾ ಮುಂದೂಡಿ. ಅನಾರೋಗ್ಯದಿಂದಾಗಿ ದೇಹ ದುರ್ಬಲವಾಗಿರುವ ಸಮಯದಲ್ಲಿ ವ್ಯಾಕ್ಸಿನ್ ತೆಗೆದುಕೊಂಡರೆ ಅಡ್ಡಪರಿಣಾಮಗಳು ಉಂಟಾಗಬಹುದು.
ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಮೊದಲು ನಿಮ್ಮ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕನಿಷ್ಠ ಒಂದು ವಾರ ಮೊದಲಿನಿಂದ್ಲೇ ಬೇಳೆಗಳು, ಮೊಟ್ಟೆ, ಹಣ್ಣುಗಳು, ಹಾಲು, ಹಸಿರು ತರಕಾರಿಗಳನ್ನು ಸೇವಿಸಲು ಆರಂಭಿಸಿ. ಬೇಸಿಗೆಯಾದ್ದರಿಂದ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬೇಕು.
ಹಸಿದಿದ್ದಾಗ ಲಸಿಕೆ ಹಾಕಿಸಿಕೊಳ್ಳಬೇಡಿ. ಲಸಿಕೆ ಪಡೆದ ಬಳಿಕ ವಿಶ್ರಾಂತಿ ಅತ್ಯಗತ್ಯ, ಲಸಿಕೆ ಹಾಕುವ ಮೊದಲು ಮತ್ತು ನಂತರ ಉತ್ತಮ ನಿದ್ದೆ ಮಾಡಬೇಕು. ನಿಮ್ಮ ದಿನಚರಿಯಲ್ಲಿ ವ್ಯಾಯಾಮವನ್ನೂ ಸೇರಿಸಿ. ಲಸಿಕೆ ಪಡೆಯುವ 2-3 ದಿನಗಳ ಮೊದಲಿನಿಂದ್ಲೇ ವ್ಯಾಯಾಮ ಮಾಡುವ ಮೂಲಕ ದೇಹವನ್ನು ಹಿಗ್ಗಿಸಿ.
ಹೀಗೆ ಮಾಡಿದರೆ ಲಸಿಕೆ ಪಡೆದ ಬಳಿಕ ಕೈ ಹೆಚ್ಚು ನೋವಾಗುವುದಿಲ್ಲ. ಮೊದಲೆರಡು ವ್ಯಾಕ್ಸಿನ್ ಪಡೆದಾಗ ಜ್ವರವೇನಾದ್ರೂ ಬಂದ್ರೆ ಅದಕ್ಕೆ ಮಾತ್ರೆ ನೀಡಲಾಗಿತ್ತು. ಆದ್ರೆ ಬೂಸ್ಟರ್ ಡೋಸ್ ಬಳಿಕ ಜ್ವರ ಕಾಣಿಸಿಕೊಂಡರೆ ಅದಕ್ಕೆ ಯಾವುದೇ ಮಾತ್ರೆಯ ಅಗತ್ಯವಿಲ್ಲ. ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿ. ಜ್ವರ ತಂತಾನೇ ಹೋಗುತ್ತದೆ.