ಕೋವಿಡ್ 19 ಲಸಿಕೆಯನ್ನು ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಅಂಬಿಗನೊಬ್ಬ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಯು ಬಿಹಾರದಲ್ಲಿ ವರದಿಯಾಗಿದೆ. ವಿಡಿಯೋದಲ್ಲಿ ಅಂಬಿಗನು ಲಸಿಕೆಯನ್ನು ಪಡೆಯದೇ ಇದ್ದರೆ ನನಗೆ ಯಾವುದೇ ತೊಂದರೆ ಆಗುವುದಿಲ್ಲವೆಂದು ಹೇಳುತ್ತಾ ಕೊರೊನಾ ಲಸಿಕೆ ಸ್ವೀಕರಿಸಲು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದಾಗಿದೆ.
ಆರೋಗ್ಯ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದು ಮಾತ್ರವಲ್ಲದೇ ಅವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ಮತ್ತೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೊರೊನಾ ಲಸಿಕೆಯಿಂದ ಪಾರಾಗಲು ಮರವೇರಿದ್ದಾನೆ. ದೇಶದಲ್ಲಿ ಕೋವಿಡ್ ದೈನಂದಿನ ಪ್ರಕರಣಗಳ ಸಂಖ್ಯೆ 3 ಲಕ್ಷ ಗಡಿ ದಾಟಿದ್ದು ಈ ಸಂದರ್ಭದಲ್ಲಿ ಕೊರೊನಾ ಲಸಿಕೆಗಳ ಮೇಲಿನ ಇಂತಹ ತಪ್ಪು ಕಲ್ಪನೆಗಳು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆರೋಗ್ಯ ಸಿಬ್ಬಂದಿ ಲಸಿಕೆಯ ಮಹತ್ವವನ್ನು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಅಂಬಿಗನು ನಾನು ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.
ಬಿಹಾರದ ಬಲಿಯಾ ಎಂಬಲ್ಲಿ ವೈರಲ್ ಆದ ಮತ್ತೊಂದು ವಿಡಿಯೋದಲ್ಲಿ ಕೋವಿಡ್ ಲಸಿಕೆಯಿಂದ ಪಾರಾಗಲು ವ್ಯಕ್ತಿಯೊಬ್ಬ ಮರವೇರಿದ್ದಾನೆ. ಇಲ್ಲಿ ಕೂಡ ಆರೋಗ್ಯ ಇಲಾಖೆ ಸಿಬ್ಬಂದಿ ಮರದಿಂದ ಕೆಳಗಿಳಿದು ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ ಅತುಲ್ ದುಬೆ, ಕೊರೊನಾ ಲಸಿಕೆಯಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಮರವೇರಿದ್ದಾನೆ. ಆದರೆ ಆರೋಗ್ಯ ಸಿಬ್ಬಂದಿ ಮನವರಿಕೆ ಮಾಡಿದ ಬಳಿಕ ಮರದಿಂದ ಕೆಳಗಿಳಿದು ಲಸಿಕೆ ಸ್ವೀಕರಿಸಲು ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.