ಕೊರೊನಾ ವೈರಸ್ ಮತ್ತು ಮಂಕಿಪಾಕ್ಸ್ ಭೀತಿಯ ನಡುವೆ ಗುಜರಾತ್‌ನಲ್ಲಿ ಹೊಸ ವೈರಸ್ ಒಂದು ಹರಡ್ತಾ ಇದೆ. ಈ ವೈರಸ್ ಅತ್ಯಂತ ವೇಗವಾಗಿ ಪ್ರಾಣಿಗಳನ್ನು ಆವರಿಸುತ್ತಿದೆ. ಗುಜರಾತ್‌ನಲ್ಲಿ ಈವರೆಗೆ ಒಟ್ಟು 999 ಜಾನುವಾರುಗಳು ಲಂಪಿ ಸ್ಕಿನ್ ಡಿಸೀಸ್‌ನಿಂದ ಸಾವನ್ನಪ್ಪಿವೆ. ಅವುಗಳಲ್ಲಿ ಹೆಚ್ಚಿನವು ಹಸು ಮತ್ತು ಎಮ್ಮೆಗಳಾಗಿವೆ.
ರಾಜ್ಯದ 14 ಜಿಲ್ಲೆಗಳಲ್ಲಿ ಈ ವೈರಸ್ ಪತ್ತೆಯಾಗಿದೆ. 37 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಈ ರೋಗ ಹರಡುವುದನ್ನು ತಡೆಯಲು ಇದುವರೆಗೆ 2.68 ಲಕ್ಷ ಜಾನುವಾರುಗಳಿಗೆ ಲಸಿಕೆ ಸಹ ಹಾಕಲಾಗಿದೆ. ಲಂಪಿ ಸ್ಕಿನ್ ಡಿಸೀಸ್ ಎಂಬುದು ಸೊಳ್ಳೆ, ನೊಣ, ಪರೋಪಜೀವಿಗಳು ಮತ್ತು ಕಣಜಗಳಿಂದ ಹರಡುವ ರೋಗ. ಇದು ಜಾನುವಾರುಗಳ ನೇರ ಸಂಪರ್ಕದಿಂದ ಮತ್ತು ಕಲುಷಿತ ಆಹಾರ, ನೀರಿನ ಮೂಲಕ ಹರಡುತ್ತದೆ.
ಈ ಸೋಂಕಿಗೆ ತುತ್ತಾದ ಜಾನುವಾರುಗಳಲ್ಲಿ ಜ್ವರ, ಕಣ್ಣು ಮತ್ತು ಮೂಗಿನಿಂದ ಸ್ರವಿಸುವಿಕೆ, ಬಾಯಿಯಿಂದ ಜೊಲ್ಲು ಸುರಿಸುವುದು, ದೇಹದಾದ್ಯಂತ ಗಡ್ಡೆಗಳಂತಹ ಮೃದುವಾದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹಾಲು ಉತ್ಪಾದನೆಯಲ್ಲಿ ಇಳಿಕೆಯಾಗುತ್ತದೆ. ಮತ್ತು ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಗುಜರಾತಿನ 14 ಜಿಲ್ಲೆಗಳ 880 ಹಳ್ಳಿಗಳಲ್ಲಿ ಈ ರೋಗ ಹರಡಿದೆ. ಇದುವರೆಗೆ 999 ಜಾನುವಾರುಗಳು ಈ ಚರ್ಮ ರೋಗದಿಂದ ಮೃತಪಟ್ಟಿವೆ.