ಕೊರೊನಾ ಸಾಂಕ್ರಾಮಿಕದ ಬಳಿಕ ಹೆಚ್ಚಿನ ದೇಶಗಳು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿವೆ. ಇನ್ನು ಕೆಲವು ರಾಷ್ಟ್ರಗಳು ಕೋವಿಡ್ ಜೊತೆಗೇ ಬದುಕುವುದನ್ನು ಅಭ್ಯಾಸ ಮಾಡಿಕೊಳ್ತಿದೆ. ಕೆಲವು ಅನಿವಾರ್ಯ ಬದಲಾವಣೆಗಳೊಂದಿಗೆ COVIDಗಿಂತ ಮೊದಲಿನ ಸ್ಥಿತಿ ಮರುಕಳಿಸುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಇತ್ತೀಚಿನ ಡೇಟಾಗಳ ಪ್ರಕಾರ, ಜನರು ಡೆಬಿಟ್ ಕಾರ್ಡ್‌ಗಳಿಗಿಂತ ಹೆಚ್ಚಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲು ಬಯಸುತ್ತಾರೆ ಎಂಬುದು ಬಹಿರಂಗವಾಗಿದೆ.
ಆರ್‌ಬಿಐ ಅಂಕಿ-ಅಂಶಗಳ ಪ್ರಕಾರ 2020-2021ರ ಹಣಕಾಸು ವರ್ಷದಲ್ಲಿ 6,30,414 ಕೋಟಿ ರೂಪಾಯಿ ವಹಿವಾಟು ಕ್ರೆಡಿಟ್ ಕಾರ್ಡ್ ಮೂಲಕ ನಡೆದಿತ್ತು. ಆದರೆ 2023ರಲ್ಲಿ 10,49,065 ಕೋಟಿ ರೂಪಾಯಿಗಳಿಗೆ ಕ್ರೆಡಿಟ್ ಕಾರ್ಡ್ ಪಾವತಿಗಳು ಏರಿಕೆಯಾಗಿವೆ. ಅದೇ ಅವಧಿಯಲ್ಲಿ ಡೆಬಿಟ್ ಕಾರ್ಡ್ ಮೂಲಕ ಮಾಡಿದ ಪಾವತಿ 6,61,385 ಕೋಟಿ ರೂಪಾಯಿಗಳಿಂದ 5,61,450 ಕೋಟಿ ರೂಪಾಯಿಗಳಿಗೆ ಕುಸಿದಿದೆ. ಈ ಬೆಳವಣಿಗೆಗಳನ್ನು ಗಮನಿಸಿದ್ರೆ ಜನರು ಡೆಬಿಟ್ ಕಾರ್ಡ್‌ಗಳಿಗಿಂತ ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಬಳಕೆಗೇ ಹೆಚ್ಚು ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗಿದೆ.
ಡಿಸೆಂಬರ್ 2019ರಲ್ಲಿ ಕ್ರೆಡಿಟ್ ಕಾರ್ಡ್ ಪಾವತಿ 65,736 ಕೋಟಿ ರೂಪಾಯಿ ಇದ್ದಿದ್ದು, 2020ರ ಡಿಸೆಂಬರ್‌ನಲ್ಲಿ 1,26,524 ಕೋಟಿ ರೂಪಾಯಿಗಳಷ್ಟಾಗಿತ್ತು. ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಗಳು ಅದೇ ಅವಧಿಯಲ್ಲಿ ಶೇ.30 ರಷ್ಟು ಕುಸಿತ ಕಂಡಿವೆ. ಡಿಸೆಂಬರ್ 2019ರಲ್ಲಿ 83,953 ಕೋಟಿ ರೂಪಾಯಿಗಳಷ್ಟಿದ್ದ ಡೆಬಿಟ್ ಕಾರ್ಡ್ ಪೇಮೆಂಟ್, 2022ರ ಡಿಸೆಂಬರ್‌ನಲ್ಲಿ 58,625 ಕೋಟಿಗಳಿಗೆ ಇಳಿಕೆಯಾಗಿದೆ.