ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ನಾಲ್ಕನೇ ಅಲೆ ಬರಬಹುದೆಂಬ ಭೀತಿ ಕಾಡುತ್ತಿದ್ದು, ಇದರ ಜೊತೆಗೆ ಮಂಕಿ ಪಾಕ್ಸ್ ಆತಂಕವೂ ಎದುರಾಗಿದೆ.
ಇದರ ಮಧ್ಯೆ ತಜ್ಞರು ಕೊರೊನಾ ನಾಲ್ಕನೇ ಅಲೆ ಆತಂಕದ ಕುರಿತು ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದರೂ ಸಹ ಹೊಸ ತಳಿ ಪತ್ತೆಯಾಗಿಲ್ಲ. ಹೀಗಾಗಿ ನಾಲ್ಕನೇ ಅಲೆ ಬರುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.
ಈಗ ವರದಿಯಾಗುತ್ತಿರುವ ಪ್ರಕರಣಗಳು ಒಮಿಕ್ರಾನ್ ಹಾಗೂ ಅದರ ಉಪ ತಳಿಗಳ ಮೂಲಕ ಬಂದಿದ್ದು, ಇದು ಗಂಟಲು ಬೇನೆ ಹಾಗು ಸಾಮಾನ್ಯ ಶೀತ ಜ್ವರದ ರೀತಿಯಲ್ಲಿ ಇರುತ್ತದೆ. ಆಸ್ಪತ್ರೆ ದಾಖಲಾಗುವ ಸಂಭವವೂ ಕಡಿಮೆ ಎಂದಿದ್ದಾರೆ.
ವೃದ್ಧರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮಾತ್ರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಹೀಗಿದ್ದರೂ ಸಹ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.