ಚೀನಾ, ಜಪಾನ್, ಕೊರಿಯಾ, ಅಮೆರಿಕಾ ಸೇರಿದಂತೆ ವಿಶ್ವದ ಕೆಲ ರಾಷ್ಟ್ರಗಳಲ್ಲಿ ಒಮಿಕ್ರಾನ್ ರೂಪಾಂತರ ತಳಿ BF.7 ಕಾಣಿಸಿಕೊಂಡಿದ್ದು, ಭಾರತದಲ್ಲೂ ನಾಲ್ವರಿಗೆ ಈ ಸೋಂಕು ತಗುಲಿದೆ. ಸೋಂಕು ತಗುಲಿದ ಓರ್ವ ವ್ಯಕ್ತಿ 18 ಮಂದಿಗೆ ಇದನ್ನು ಹರಡಬಲ್ಲರು ಎಂದು ಹೇಳಲಾಗಿದ್ದು, ಹೀಗಾಗಿ ಭಾರತದಲ್ಲಿ ಕಟ್ಟೆಚರ ವಹಿಸಲಾಗಿದೆ.
ಕರ್ನಾಟಕದಲ್ಲಿ ಕೂಡಾ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹಲವು ಮಾರ್ಗಸೂಚಿಗಳನ್ನು ರೂಪಿಸಿದ್ದು, ಜೊತೆಗೆ ಹೊಸ ವರ್ಷಾಚರಣೆ ವೇಳೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ.
ಇದರ ಜೊತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ಲಸಿಕಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಬೂಸ್ಟರ್ ಡೋಸ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಎರಡು ಲಸಿಕೆ ಪಡೆದಿರುವವರು ಬೂಸ್ಟರ್ ಡೋಸ್ ಆಗಿ ಮೂರನೇ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಈ ರೀತಿ ಲಸಿಕಾ ಶಿಬಿರ ಏರ್ಪಡಿಸುವ ಮೂಲಕ ಎಲ್ಲರಿಗೂ ಬೂಸ್ಟರ್ ಡೋಸ್ ನೀಡುವ ಇರಾದೆಯನ್ನು ಸರ್ಕಾರ ಹೊಂದಿದೆ.