ಕೊರೊನಾ ಎರಡನೇ ಅಲೆ ಆರ್ಭಟದ ಬಳಿಕ ಬಹುತೇಕ ತಣ್ಣಗಾಗಿದ್ದ ಮಹಾಮಾರಿ ಈಗ ಮತ್ತೆ ತನ್ನ ಆಟ ಆರಂಭಿಸಿದೆ. ಕಳೆದೊಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನು ಜಾರಿಗೊಳಿಸಿದೆ.
ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದಂತೆ ಲಸಿಕೆ ಹಾಕಿಸಿಕೊಳ್ಳಲು ಈವರೆಗೆ ಮೈಮರೆತಿದ್ದ ಜನ ಈಗ ಆರೋಗ್ಯ ಕೇಂದ್ರಗಳ ಮುಂದೆ ಕ್ಯೂ ನಿಂತಿದ್ದಾರೆ. ಬಹಳಷ್ಟು ಜನ ಮೊದಲನೇ ಲಸಿಕೆ ಹಾಕಿಸಿಕೊಂಡ ಬಳಿಕ ಎರಡನೇ ಲಸಿಕೆ ಹಾಕಿಸಿಕೊಳ್ಳಲು ಅವಧಿ ಪೂರ್ಣಗೊಂಡರೂ ಸಹ ಮುಂದಾಗಿರಲಿಲ್ಲ. ಇದೀಗ ಅವರುಗಳು ಸಹ ಲಸಿಕೆ ಹಾಕಿಸಿಕೊಳ್ಳಲು ಧಾವಿಸುತ್ತಿದ್ದಾರೆ.
ಇದರ ಮಧ್ಯೆ 15 ರಿಂದ 18 ವರ್ಷದವರಿಗೂ ಲಸಿಕಾ ಅಭಿಯಾನ ನಡೆಸಲಾಗುತ್ತಿದ್ದು, ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ದಿನವಾದ ಇಂದೂ ಸಹ ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರಗಳ ಮುಂದೆ ಜನತೆ ಕ್ಯೂ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.