ಜಿನೀವಾ: ಕೋವಿಡ್ ಓಡಿಹೋಗಿದೆ ಎಂದು ನಿಶ್ಚಿಂತೆಯಿಂದ ಇರಬೇಡಿ, ಅದಿನ್ನೂ ನಮ್ಮ ಜತೆಯೇ ಇದ್ದು, ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಸಾಂಕ್ರಾಮಿಕ ರೋಗವು ಪ್ರಾರಂಭವಾದ ದಿನಗಳ ಆರಂಭವನ್ನು ಗಮನಿಸಿದರೆ ಈಗ ಇಳಿಮುಖವಾಗಿದ್ದರೂ ಅದಿನ್ನೂ ಸಂಪೂರ್ಣವಾಗಿ ಹೋಗಿಲ್ಲ. ಕೋವಿಡ್ ರೋಗಿಗಳು ಪತ್ತೆಯಾಗುತ್ತಲೇ ಇದ್ದಾರೆ, ಆದ್ದರಿಂದ ಇದರ ಬಗ್ಗೆ ಅಸಡ್ಡೆ ಮಾಡುವುದು ಸಲ್ಲದು ಎಂದು ಸಂಸ್ಥೆಯ ಹೆಲ್ತ್ ರೆಗ್ಯುಲೇಷನ್ಸ್ ಎಮರ್ಜೆನ್ಸಿ ಕಮಿಟಿಯು ಹೇಳಿದೆ.
ಇತರ ಉಸಿರಾಟದ ವೈರಸ್‌ಗಳಿಗೆ ಹೋಲಿಸಿದರೆ ಕೋವಿಡ್ -19ನಿಂದ ಉಂಟಾಗುತ್ತಿರುವ ಸಾವುಗಳ ಸಂಖ್ಯೆ ಇಂದಿಗೂ ಹೆಚ್ಚಾಗಿವೆ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ, ಕೋವಿಡ್-19-ಸಂಬಂಧಿತ ತೊಡಕುಗಳು ಮತ್ತು ಕೋವಿಡ್-19 ನಂತರದ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆ ನೀಡಿವೆ. ಉತ್ತರ ಗೋಳಾರ್ಧದಲ್ಲಿ ಮುಂಬರುವ ಚಳಿಗಾಲದಲ್ಲಿ ಇದು ಏಕಾಏಕಿ ವಿಕಸನಗೊಳ್ಳಬಹುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.
ಇದೇ ಸಂದರ್ಭದಲ್ಲಿ ಸಮಿತಿಯು ಭವಿಷ್ಯದಲ್ಲಿ ಕೆಲ ಪ್ರಮುಖ ಆದ್ಯತೆಗಳ ಬಗ್ಗೆ ಗಮನ ಸೆಳೆದಿದೆ. ಲಸಿಕೆಗಳ ಪ್ರಮಾಣ ಹೆಚ್ಚು ಮಾಡುವುದು, ಕೈಗೆಟುಕುವ ದರದಲ್ಲಿ ಚಿಕಿತ್ಸೆಗಳನ್ನು ಮುಂದುವರಿಸುವುದು ಮತ್ತು ಈ ಸೋಂಕಿಗೆ ಸಂಬಂಧಿಸಿದಂತೆ ಸಕಲ ಮುಂಜಾಗರೂಕತೆಯನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ಸಮಿತಿ ಹೇಳಿದೆ.