ನವದೆಹಲಿ : ರಾಷ್ಟ್ರಧಾನಿಯಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದಾರೆ.
ಈಗ ಅಲ್ಲಿ ‘ಯೆಲ್ಲೋ ಅಲರ್ಟ್’ ನ ಮೂಲಕ ಹಲವಾರು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಕೊರೊನಾ ಸ್ಥಿತಿ ಕುರಿತು ಸಂಬಂಧಿಸಿದ ಉನ್ನತ ಮಟ್ಟದ ಸಭೆ ನಡೆಸಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೇಣಿಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ ಮೂಲಕ ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
‘ಯೆಲ್ಲೋ ಅಲರ್ಟ್’ ಮೂಲಕ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿರುವ ಸರ್ಕಾರ, ಸದ್ಯದಲ್ಲಿಯೇ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ದೆಹಲಿಯಲ್ಲಿ ಪ್ರತಿ ದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದುವರೆಗೂ 142 ಜನರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ.
ಅಲ್ಲದೇ, ‘ಯೆಲ್ಲೋ ಅಲರ್ಟ್’ ಅಡಿ, ಸಾರಿಗೆ ಹಾಗೂ ರೈಲಿನಲ್ಲಿ ಆಸನ ಸಾಮರ್ಥ್ಯವನ್ನು ಕಡಿಮೆ ಮಾಡಲಾಗುವುದು. ಅವಶ್ಯಕ ವಸ್ತುಗಳ ಮಾರಾಟ ಹೊರತುಪಡಿಸಿ, ಇನ್ನುಳಿದ ವಾಣಿಜ್ಯ ಅಂಗಡಿಗಳನ್ನು ಒಂದು ದಿನ ಬಿಟ್ಟು ಒಂದು ದಿನ ತೆರೆಯುವಂತೆ ಸೂಚಿಸಲಾಗುವುದು ಹಾಗೂ ಶಾಲಾ – ಕಾಲೇಜುಗಳನ್ನು ಬಂದ್ ಮಾಡಲಾಗುವುದು. ಇದರೊಂದಿಗೆ ರಾತ್ರಿ ಹೊತ್ತು ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.