ಮೈಸೂರು : ಜಿಲ್ಲೆಯ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಪಂ ಸದಸ್ಯರೊಬ್ಬರು ಕೊರೊನಾ ಹೆಮ್ಮಾರಿಗೆ ಪ್ರಾಣ ಬಿಟ್ಟಿದ್ದು, ಚುನಾವಣಾ ಆಯೋಗ ಮರು ಚುನಾವಣೆ ಘೋಷಿಸಿತ್ತು. ಆದರೆ, ಗ್ರಾಮಸ್ಥರೆಲ್ಲ ಒಂದಾಗಿ ಮೃತಪಟ್ಟ ವ್ಯಕ್ತಿಯ ಸಹೋದರನನ್ನೇ ಅವಿರೋಧವಾಗಿ ಆಯ್ಕೆ ಮಾಡುವುದರ ಮೂಲಕ ಮಾದರಿಯಾಗಿದ್ದಾರೆ.
ಕಳೆದ ವರ್ಷ ನಡೆದಿದ್ದ ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯೋಗೇಶ್ ಎಂಬುವವರು ಗೆಲುವು ಸಾಧಿಸಿದ್ದರು. ಆದರೆ, ಕೊರೊನಾ ಹೆಮ್ಮಾರಿ ಅವರನ್ನು ಬಲಿ ಪಡೆದಿತ್ತು. ಸದ್ಯ ಖಾಲಿ ಆಗಿದ್ದ ಆ ಸ್ಥಾನಕ್ಕೆ ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದು, ಡಿ. 27ರಂದು ಮತದಾನ ಘೋಷಣೆಯಾಗಿತ್ತು. ಆದರೆ, ಗ್ರಾಮಸ್ಥರು ಹಾಗೂ ಆ ವಾರ್ಡ್ ನ ಮತದಾರರೆಲ್ಲ ಒಂದುಗೂಡಿ ಅವರ ಸಹೋದರ ಕೆ.ಜಿ. ಆನಂದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ಖಾಲಿ ಇದ್ದ ಸ್ಥಾನಕ್ಕೆ ಕೆ.ಜಿ. ಆನಂದ್ ಅವರೊಂದಿಗೆ ಮತ್ತಿಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಗ್ರಾಮಸ್ಥರೆಲ್ಲ ಒಂದಾಗಿ ಆನಂದ್ ಮಾತ್ರ ಕಣದಲ್ಲಿ ಉಳಿಯುವಂತೆ ಮಾಡಿದ್ದಾರೆ. ಪರಿಣಾಮವಾಗಿ ಉಮೇದುವಾರಿಕೆ ಸಲ್ಲಿಸಿದ್ದ ಮತ್ತಿಬ್ಬರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಹೀಗಾಗಿ ಆನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.