ಕೊರೊನಾ ಚಿಕಿತ್ಸೆಯ ಮೊತ್ತವನ್ನ ಭರಿಸಲು ಹೆಣಗಾಡುತ್ತಿರುವ ಕುಟುಂಬಗಳಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಗುಡ್ ನ್ಯೂಸ್ ಒಂದನ್ನ ನೀಡಿವೆ. ಕೋವಿಡ್ ಚಿಕಿತ್ಸೆಗಾಗಿ ಬ್ಯಾಂಕುಗಳು 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲು ಮುಂದಾಗಿವೆ. ಸಂಬಳ ಪಡೆಯುವವರು, ಸಂಬಳ ಪಡೆಯದವರು ಹಾಗೂ ಪಿಂಚಣಿದಾರರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ದೇಶದಲ್ಲಿರುವ ಕೊರೊನಾ 2ನೇ ಅಲೆಯ ಗಂಭೀರತೆಯನ್ನ ಗಮನದಲ್ಲಿರಿಸಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಇಂಡಿಯನ್ ಬ್ಯಾಂಕುಗಳ ಸಂಘ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ನಿರ್ಧಾರವನ್ನ ಘೋಷಣೆ ಮಾಡಿವೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಕೊರೊನಾ ಚಿಕಿತ್ಸೆಗೆ 25000 ರೂ.ನಿಂದ 5 ಲಕ್ಷ ರೂಪಾಯಿವರೆಗೆ ಅಸುರಕ್ಷಿತ ವೈಯಕ್ತಿಕ ಸಾಲ ಸೌಲಭ್ಯವನ್ನ ನೀಡಲಿವೆ. ಸಂಬಳ ಇರುವವರು, ಇಲ್ಲದೇ ಇರುವವರು ಹಾಗೂ ಪಿಂಚಣಿದಾರರು ಈ ಸಾಲ ಸೌಲಭ್ಯಕ್ಕೆ ಅರ್ಹರು ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಲಾಗಿದೆ.
ಪರಿಷ್ಕೃತ ಇಸಿಜಿಎಲ್ಎಸ್ನ ಮಾನದಂಡಗಳ ಅಡಿಯಲ್ಲಿ ಆಮ್ಲಜನಕ ಪ್ಲಾಂಟ್ಗಳನ್ನ ಸ್ಥಾಪಿಸುವ ಹಾಗೂ ಆರೋಗ್ಯ ಇಲಾಖೆ ಸಂಬಂಧಿ ಉದ್ಯಮವನ್ನ ಮಾಡುವವರಿಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸಾಲ ಸೌಲಭ್ಯವನ್ನ ನೀಡಲಿವೆ. ಈ ಹಿಂದೆ ಈ ವಿಚಾರವಾಗಿ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವಾಲಯ, ಇಸಿಜಿಎಲ್ಜಿಎಸ್ 4.0 ದ ಅಡಿಯಲ್ಲಿ ಆಸ್ಪತ್ರೆಗಳಿಗೆ, ಆಕ್ಸಿಜನ್ ಪ್ಲಾಂಟ್ಗಳನ್ನ ಸ್ಥಾಪಿಸುವ ನರ್ಸಿಂಗ್ ಹೋಮ್ಗಳಿಗೆ 2 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ಹೇಳಿತ್ತು.
ಲಸಿಕೆ ಹಾಗೂ ವೆಂಟಿಲೇಟರ್ಗಳನ್ನ ಉತ್ಪಾದಿಸುವ ಕಂಪನಿಗಳಿಗೆ, ಮೆಟ್ರೋ ಉಲ್ಲೇಖಿಸಿದ ಸಂಸ್ಥೆಗಳಿಗೆ 100 ಕೋಟಿ ರೂಪಾಯಿಗಳ ಸಾಲ ಸೌಲಭ್ಯ ಸಿಗಲಿದೆ. ನಗರ ಕೇಂದ್ರಗಳಲ್ಲಿರುವ ಸಂಸ್ಥೆಗಳಿಗೆ 20 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗಲಿದೆ. ಶ್ರೇಣಿ 2 ರಿಂದ ಶ್ರೇಣಿ 4ರಲ್ಲಿರುವ ಸಂಸ್ಥೆಗಳಿಗೆ 10 ಕೋಟಿ ರೂಪಾಯಿ ಸಾಲವನ್ನ ನೀಡಲಾಗುತ್ತೆ. ಅಲ್ಲದೇ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಈ ಎಲ್ಲಾ ವಿಭಾಗದಲ್ಲಿ ಸಿಗುವ ಸಾಲಗಳಿಗೆ ಬಡ್ಡಿದರದಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಹೇಳಿವೆ.