alex Certify ಕೊರೆಯುವ ಚಳಿಯಲ್ಲೂ ಕೇವಲ ಟೀ ಶರ್ಟ್‌ ಧರಿಸಿ ಪಾದಯಾತ್ರೆ ಮಾಡ್ತಿದ್ದಾರೆ ರಾಹಲ್‌ ಗಾಂಧಿ, ಅವರಿಗೇಕೆ ಶೀತವಾಗ್ತಿಲ್ಲ ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೆಯುವ ಚಳಿಯಲ್ಲೂ ಕೇವಲ ಟೀ ಶರ್ಟ್‌ ಧರಿಸಿ ಪಾದಯಾತ್ರೆ ಮಾಡ್ತಿದ್ದಾರೆ ರಾಹಲ್‌ ಗಾಂಧಿ, ಅವರಿಗೇಕೆ ಶೀತವಾಗ್ತಿಲ್ಲ ಗೊತ್ತಾ ?

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೆಯುವ ಚಳಿಯಲ್ಲೂ ಸ್ವೆಟರ್‌ ಅಥವಾ ಜಾಕೆಟ್‌ ಧರಿಸದೆ ಕೇವಲ ಟೀ ಶರ್ಟ್‌ನಲ್ಲಿ ಕಾಣಿಸಿಕೊಳ್ತಿರೋದು ಭಾರೀ ಚರ್ಚೆಗೆ ಗ್ರಾಸವಾಗ್ತಿದೆ. ರಾಹುಲ್‌ಗೆ ಚಳಿಯಾಗುತ್ತಿಲ್ಲವೇ ಅನ್ನೋದು ಅನೇಕರ ಪ್ರಶ್ನೆ. ಚಳಿಯ ತೀವ್ರತೆ ಎಲ್ಲರ ದೇಹದ ಮೇಲೆ ಒಂದೇ ತೆರನಾದ ಪರಿಣಾಮ ಬೀರುವುದಿಲ್ಲ. ಕೆಲವರಿಗೆ ಜಾಸ್ತಿ ಚಳಿಯಾದ್ರೆ ಇನ್ನು ಕೆಲವರಿಗೆ ಚಳಿ ಕಡಿಮೆ. ಇದಕ್ಕೆ ವೈಜ್ಞಾನಿಕ ಕಾರಣಗಳೇನು ಅನ್ನೋದನ್ನು ನೋಡೋಣ.

ನಮ್ಮ ದೇಹದಲ್ಲಿ ಚರ್ಮದ ಅಡಿಯಲ್ಲಿ ಥರ್ಮೋ-ರಿಸೆಪ್ಟರ್ ನರಗಳು ಇವೆ. ಇದು ಮೆದುಳಿಗೆ ಶೀತದ ಸಂದೇಶವನ್ನು ಕಳುಹಿಸುತ್ತದೆ. ನಂತರ ಮೆದುಳಿನಲ್ಲಿರುವ ಹೈಪೋಥಾಲಮಸ್ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ಗೂಸ್‌ಬಂಪ್‌ಗಳು ಕಾಣಿಸಿಕೊಳ್ಳುತ್ತವೆ, ಸ್ನಾಯುಗಳು ಕುಗ್ಗಲು ಪ್ರಾರಂಭಿಸುತ್ತವೆ. ನಮಗೆ ಚಳಿಯ ಅನುಭವವಾಗುತ್ತದೆ.

ಕೆಲವರಿಗೆ ಚಳಿ ಹೆಚ್ಚು, ಇನ್ನು ಕೆಲವರಿಗೆ ಕಡಿಮೆ ಏಕೆ ?

ಅಧ್ಯಯನದ ಪ್ರಕಾರ ಚಳಿಯ ಅನುಭವ ಲಿಂಗ, ವಯಸ್ಸು ಮತ್ತು ಜೀನ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಒಬ್ಬ ವ್ಯಕ್ತಿಯು ಎಷ್ಟು ಶೀತವನ್ನು ಅನುಭವಿಸುತ್ತಾನೆ ಎಂಬುದನ್ನು ಇದು ನಿರ್ಧರಿಸುತ್ತದೆ. ತಾಪಮಾನವನ್ನು ತಡೆದುಕೊಳ್ಳುವ ಮತ್ತು ಶೀತವನ್ನು ಅನುಭವಿಸುವ ಪ್ರತಿಯೊಬ್ಬರ ಸಾಮರ್ಥ್ಯವೂ ವಿಭಿನ್ನವಾಗಿರುತ್ತದೆ.ವಯಸ್ಸಾದವರಿಗೆ ಚಳಿ ಕಡಿಮೆ, ಯುವಕರು ಹೆಚ್ಚು ಚಳಿ ಅನುಭವಿಸುತ್ತಾರೆ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ. ತಾಪಮಾನ ಕಡಿಮೆ ಆಗುವವರೆಗೆ ವಯಸ್ಸಾದವರು ಚಳಿಯಿಂದ ನಡುಗುವುದಿಲ್ಲ, ಆದರೆ ಯುವಕರು ತಾಪಮಾನ ಸ್ವಲ್ಪ ಕಡಿಮೆಯಾದರೂ ನಡುಗಲು ಪ್ರಾರಂಭಿಸುತ್ತಾರೆ. ವಯಸ್ಸಾದವರಿಗೆ ಹೋಲಿಸಿದರೆ, ಯುವಕರು ಶೀತವನ್ನು ಅನುಭವಿಸುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದಾರೆ, ಇದು ವಯಸ್ಸಾದಂತೆ ಕ್ರಮೇಣ ಕಡಿಮೆಯಾಗುತ್ತದೆ.

ಚಳಿಯಲ್ಲಿ ದೇಹ ಏಕೆ ನಡುಗಲು ಪ್ರಾರಂಭಿಸುತ್ತದೆ ?

ಪರಿಸರದ ಉಷ್ಣತೆಯು ಕಡಿಮೆಯಾದಾಗ ಮೆದುಳಿನಲ್ಲಿರುವ ಹೈಪೋಥಾಲಮಸ್ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಪ್ರಾರಂಭಿಸುತ್ತದೆ ಮತ್ತು ದೇಹದ ಭಾಗಗಳು ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಕಾರಣದಿಂದಾಗಿ, ದೇಹದಲ್ಲಿ ಹೆಚ್ಚಿನ ಚಯಾಪಚಯ ಶಾಖವು ಉತ್ಪತ್ತಿಯಾಗುತ್ತದೆ, ಇದೇ ಕಾರಣಕ್ಕೆ ದೇಹದಲ್ಲಿ ನಡುಕ ಪ್ರಾರಂಭವಾಗುತ್ತದೆ. ತಾಪಮಾನವು ಸಮತೋಲನಗೊಂಡ ನಂತರ ನಡುಕ ನಿಲ್ಲುತ್ತದೆ ಅಥವಾ ಕಡಿಮೆಯಾಗುತ್ತದೆ.

ಹೆಚ್ಚು ಚಳಿಯ ಅನುಭವವಾಗುವುದೇಕೆ ?

ಕೆಲವರಿಗೆ ಅತಿಯಾಗಿ ಚಳಿಯಾಗುತ್ತದೆ, ಇದಕ್ಕೆ ಹಲವು ಕಾರಣಗಳಿರಬಹುದು. ಉದ್ದಕ್ಕೆ ಅನುಗುಣವಾಗಿ ದೇಹದ ತೂಕವು ತುಂಬಾ ಕಡಿಮೆಯಿದ್ದರೆ ಹೆಚ್ಚು ಚಳಿಯಾಗುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆ ಮತ್ತು ಥೈರಾಯ್ಡ್ ನಿಂದಲೂ ಅತಿಯಾದ ಶೀತವಾಗುವುದುಂಟು. ದೇಹದ ಎಲ್ಲಾ ಭಾಗಗಳಲ್ಲಿ ಸರಿಯಾದ ರಕ್ತ ಪರಿಚಲನೆ ಇಲ್ಲದಿದ್ದರೂ ವಿಪರೀತ ಚಳಿಯಾಗುತ್ತದೆ. ನಿದ್ರೆಯ ಕೊರತೆ, ನಿರ್ಜಲೀಕರಣ ಮತ್ತು ವಿಟಮಿನ್ ಬಿ ಕೊರತೆ ಕೂಡ ಅತಿಯಾದ ಶೀತಕ್ಕೆ ಕಾರಣವಾಗಬಹುದು.

ರಾಹುಲ್ ಗಾಂಧಿಗೆ ಏಕೆ ಚಳಿಯಾಗುತ್ತಿಲ್ಲ ?

ತೀರಾ ತಣ್ಣನೆಯ ಸ್ಥಳಗಳಲ್ಲಿ ವಾಸಿಸುವ ಜನರ ದೇಹವು ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಇದಲ್ಲದೇ ಶಾರೀರಿಕ ಚಟುವಟಿಕೆ ಉತ್ತಮವಾಗಿದ್ದರೆ ದೇಹದ ಚಯಾಪಚಯ ಕ್ರಿಯೆ ಚೆನ್ನಾಗಿದ್ದು ಚಳಿಯೂ ಕಡಿಮೆಯಾಗುತ್ತದೆ. ನಮ್ಮ ದೇಹದ ಕೊಬ್ಬು ಕೂಡ ಶೀತದಿಂದ ನಮ್ಮನ್ನು ರಕ್ಷಿಸುತ್ತದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬಹಳ ಸಮಯದಿಂದ ತೊಡಗಿಸಿಕೊಂಡಿದ್ದಾರೆ ಮತ್ತು ಅವರ ದೇಹವು ಬಾಹ್ಯ ಪರಿಸರಕ್ಕೆ ಅನುಗುಣವಾಗಿ ಹೊಂದಿಕೊಂಡಿರಬಹುದು. ಪ್ರತಿದಿನ ಕಿಲೋಮೀಟರ್‌ಗಟ್ಟಲೆ ನಡೆಯುವುದರಿಂದ ಉತ್ತಮ ದೈಹಿಕ ಚಟುವಟಿಕೆಯಾಗುತ್ತಿದ್ದು, ಹೆಚ್ಚಿನ ಶೀತದ ಅನುಭವ ಅವರಿಗಾಗುತ್ತಿಲ್ಲ.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...