ಬಡವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸು ನಿಮ್ಮಲ್ಲಿದ್ದಲ್ಲಿ ಅದಕ್ಕೆ ಸಿರಿವಂತಿಕೆ ಬೇಕೆಂದೇನೂ ಇಲ್ಲ. ಅದಕ್ಕಾಗಿ ಸಹಾಯ ಮಾಡುವ ಮನಸ್ಸಿದ್ದರೆ ಸಾಕು, ಕಷ್ಟದಲ್ಲಿದವರಿಗೆ ಸಹಾಯಹಸ್ತ ಚಾಚಬಹುದು. ಇದಕ್ಕೆ ಬ್ರಿಟನ್ ನ ಈ 11ರ ಬಾಲಕಿಯ ಔದಾರ್ಯವೇ ಉದಾಹರಣೆಯಾಗಿದೆ.
ಹೌದು, ಕೊರೆಯುವ ಚಳಿಯಲ್ಲಿ ಉಳ್ಳವರು ಬೆಚ್ಚಗೆ ಮನೆಯಲ್ಲಿ ಹಾಸಿಗೆ ಹೊದ್ದು ಮಲಗಿದ್ದರೆ, ನಿರಾಶ್ರಿತರು ಮಾತ್ರ ಗಡಗಡ ನಡುಗುತ್ತಲೇ ಚಳಿಗಾಲವನ್ನು ಕಳೆಯಬೇಕಿದೆ.
ಇದನ್ನು ಮನಗಂಡ 11ರ ಬಾಲಕಿ ಅವರಿಗಾಗಿ ತನ್ನಿಂದಾಗುವ ಏನಾದ್ರೂ ಸಹಾಯ ಮಾಡಬೇಕು ಎಂದು ಯೋಚಿಸಿದ್ದಾಳೆ. ಈ ವೇಳೆ ಹೊಳೆದಿದ್ದೇ, ಚಿಪ್ಸ್ ಪ್ಯಾಕೆಟ್ ನಲ್ಲಿ ಬೆಡ್ಶೀಟ್ ತಯಾರಿಸುವ ಕಲೆ.
ಹೌದು, ಬ್ರಿಟನ್ನ ವೇಲ್ಸ್ ನಿವಾಸಿಯಾದ ಅಲೈಸಾ ಡಿಯಾನ್ ಎಂಬ ಬಾಲಕಿ ಚಿಪ್ಸ್ ಪ್ಯಾಕೆಟ್ಗಳನ್ನು ಸಂಗ್ರಹಿಸಿ ಅದರಿಂದ ಬೆಡ್ಶೀಟ್ ತಯಾರಿಸಿದ್ದಾಳೆ. ಬಳಿಕ ಈ ಬೆಡ್ಶೀಟ್ ಅನ್ನು ನಿರಾಶ್ರಿತರಿಗೆ ನೀಡಲು ಮುಂದಾಗಿದ್ದಾಳೆ.
ಚಳಿಗಾಲದಲ್ಲಿ ನಿರಾಶ್ರಿತರಿಗೆ ಯಾವುದೇ ತೊಂದರೆ ಆಗಬಾರದು ಎಂದು ಅಲೈಸಾ ನಿರ್ಧರಿಸಿದ್ದಳು. ಒಂದು ಬೆಡ್ಶೀಟ್ ತಯಾರಿಸಲು 44 ಚಿಪ್ಸ್ ಪ್ಯಾಕೇಟ್ಗಳು ಬೇಕಾಗುತ್ತದೆ. ಹೀಗಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಹಾಯದಿಂದ ಬಾಲಕಿಯು ಟೋಪಿ, ಗ್ಲೌಸ್, ಸಾಕ್ಸ್ ಮುಂತಾದವುಗಳನ್ನು ನಿರಾಶ್ರಿತರಿಗೆ ನೀಡಿದ್ದಾಳೆ.
ಇನ್ನು ಬಾಲಕಿ ಅಲೈಸಾಗೆ ತಾಯಿ ಡಾರ್ಲೆನೆ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ಪುತ್ರಿಯ ಸಾಮಾಜಿಕ ಕಳಕಳಿಗೆ ತಾಯಿ ಡಾರ್ಲೆನೆ ಅಪಾರ ಸಂತೋಷಪಟ್ಟಿದ್ದಾರೆ.