ದಟ್ಟವಾದ ಮಂಜು ಮತ್ತು ಕೊರೆಯುವ ಚಳಿಯಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವೆಟರ್ ಕೂಡ ಹಾಕದೇ ಕೇವಲ ಟಿಶರ್ಟ್ ಧರಿಸಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕ್ತಾರೆ. ಈ ವಿಚಾರ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಹರಿಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊರೆಯುವ ಚಳಿಯಲ್ಲಿ ಅಂಗಿಯನ್ನೂ ಹಾಕದೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹರಿಯಾಣದ ಕರ್ನಾಲ್‌ನಲ್ಲಿ ಸೆರೆಯಾಗಿರುವ ವಿಡಿಯೋ ಇದು.
ಇಂದು ಬೆಳಿಗ್ಗೆ ದೆಹಲಿ ಎನ್‌ಸಿಆರ್‌ನಲ್ಲಿ ಕನಿಷ್ಠ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ಸಮಯದಲ್ಲಿ ಕರ್ನಾಲ್‌ನಲ್ಲಿ ತಾಪಮಾನ 4.5 ಡಿಗ್ರಿಗಳಷ್ಟಿತ್ತು. ಇಂಥಾ ಚಳಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹದ ಕೊರತೆ ಇರಲಿಲ್ಲ. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ಯುವ ಕಾರ್ಯಕರ್ತರು ಬಸ್‌ನ ಛಾವಣಿಯ ಮೇಲೆ ನಿಂತು ಶರ್ಟ್ ಕಳಚಿ ಡಾನ್ಸ್ ಮಾಡಿದ್ದಾರೆ. ಪಕ್ಷದ ಮುಖಂಡರ ಪೋಸ್ಟರ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಕುಣಿದಿದ್ದಾರೆ.
ಹರಿಯಾಣದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಜೋರಾಗಿತ್ತು. ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ ಅಂತಾರಾಷ್ಟ್ರೀಯ ಆಟಗಾರರೂ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಯಾತ್ರೆ ಜನವರಿ 10 ರಂದು ಶಂಭು ಗಡಿಯಿಂದ ಪಂಜಾಬ್‌ಗೆ ಪ್ರವೇಶಿಸಿ ಫತೇಘರ್ ಸಾಹಿಬ್‌ಗೆ ಹೊರಡಲಿದೆ. ಜನವರಿ 11 ರಂದು ಗುರುದ್ವಾರ ಸಾಹಿಬ್‌ಗೆ ಪೂಜೆ ಸಲ್ಲಿಸಿದ ನಂತರ, ರಾಹುಲ್ ಗಾಂಧಿ ಪಂಜಾಬ್‌ಗೆ ಭೇಟಿ ನೀಡುವ ಮೊದಲು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.