ಕೋಲ್ಕತ್ತಾ: ಖ್ಯಾತ ಗಾಯಕ ಕೃಷ್ಣಕುಮಾರ್(ಕೆಕೆ) ಕುನ್ನತ್ ಅವರು ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ದಕ್ಷಿಣ ಕೋಲ್ಕತ್ತಾದ ನಜ್ರುಲ್ ಮಂಚದಲ್ಲಿ ಕಾಲೇಜು ಆಯೋಜಿಸಿದ್ದ ಸಂಗೀತ ಕಚೇರಿಯಲ್ಲಿ ಸಂಜೆ ಸುಮಾರು ಒಂದು ಗಂಟೆ ಕಾಲ ಕೆಕೆ ಪ್ರದರ್ಶನ ನೀಡಿದ್ದಾರೆ. ಅವರು ತಮ್ಮ ಹೋಟೆಲ್ ತಲುಪಿದ ನಂತರ ಕುಸಿದುಬಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಸಿಎಂಆರ್ಐ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಕೆ ಅವರು ವೇದಿಕೆಯಲ್ಲಿ ಕಾರ್ಯಕ್ರಮ ಮುಗಿಸಿದಾಗ ಅಸ್ವಸ್ಥರಾದಂತೆ ಕಂಡು ಬಂದಿದ್ದಾರೆ. ಈ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ರಾತ್ರಿ 10 ಗಂಟೆ ಸುಮಾರಿಗೆ ಕೆಕೆ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ನಮಗೆ ಚಿಕಿತ್ಸೆ ನೀಡಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಸ್ಪತ್ರೆಯ ವೈದ್ಯರು “ಹೃದಯ ಸ್ತಂಭನ” ಸಾವಿಗೆ ಕಾರಣ ಎಂದು ಶಂಕಿಸಿದ್ದಾರೆ.
ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಬುಧವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಕೋಲ್ಕತ್ತಾ ಪೊಲೀಸ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕೆಕೆ ಎಂದೇ ಹೆಸರಾಗಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಅವರ ಹಾಡುಗಳು ಎಲ್ಲಾ ವಯೋಮಾನದ ಜನರ ಮನಸೂರೆಗೊಂಡಿದ್ದವು. ಅವರ ಹಾಡುಗಳ ಮೂಲಕ ನಾವು ಅವರನ್ನು ಯಾವಾಗಲೂ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ನನಗೆ ಅವರೊಂದಿಗೆ ಹಲವು ವೈಯಕ್ತಿಕ ನೆನಪುಗಳಿವೆ. ನಾವು ನಮ್ಮ ವೃತ್ತಿಜೀವನವನ್ನು ಒಟ್ಟಿಗೆ ಪ್ರಾರಂಭಿಸಿದ್ದೇವೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರು. ಭಾರತದಲ್ಲಿ ರಾಕ್ ಸಂಗೀತದ ಆಗಮನಕ್ಕೆ ಕೆಕೆ ಅವರ ಕೊಡುಗೆ ದೊಡ್ಡದಾಗಿದೆ ಎಂದು ಗಾಯಕ, ರಾಜಕಾರಣಿಯಾಗಿರುವ ಟಿಎಂಸಿ ಶಾಸಕ ಬಾಬುಲ್ ಸುಪ್ರಿಯೊ ಆಸ್ಪತ್ರೆ ಬಳಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅವರ ಸಾವಿನ ಸುದ್ದಿ ಕೇಳಿ ಆಸ್ಪತ್ರೆ ಬಳಿ ಭಾರೀ ಸಂಖ್ಯೆಯ ಅಭಿಮಾನಿಗಳು ಸೇರಿದ್ದು, ಅವರನ್ನು ಚದುರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಆಸ್ಪತ್ರೆಯ ಹೊರಗೆ ಹೆಚ್ಚಿನ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಬಹುಮುಖ ಗಾಯಕ ಕೆಕೆ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.