ತಮಿಳುನಾಡಿನ ಕೊಡೈಕೆನಾಲ್ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿ 28 ವರ್ಷದ ಯುವಕನೊಬ್ಬ ನೀರುಪಾಲಾಗಿದ್ದಾನೆ. ಕಾಲು ಜಾರಿ ಜಲಪಾತದೊಳಗೆ ಬಿದ್ದಿದ್ದಾನೆ. ಜೊತೆಗಿದ್ದ ಆತನ ಸ್ನೇಹಿತ ವಿಡಿಯೋ ಮಾಡುತ್ತಿದ್ದ. ಈ ಭೀಕರ ದುರಂತ ಕೂಡ ಮೊಬೈಲ್ನಲ್ಲಿ ಸೆರೆಯಾಗಿದೆ.
ಯುವಕನನ್ನು ಅಜಯ್ ಪಾಂಡ್ಯನ್ ಅಂತಾ ಗುರುತಿಸಲಾಗಿದೆ. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಸಿಬ್ಬಂದಿ ಯುವಕನಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಆದ್ರೆ ಇದುವರೆಗೂ ಆತನ ಸುಳಿವು ಸಿಕ್ಕಿಲ್ಲ. ಅಜಯ್ ಸ್ನೇಹಿತ ಕಲ್ಯಾಣ ಸುಂದರಂ ಮೊಬೈಲ್ನಲ್ಲಿ ಆತ ನೀರಿಗೆ ಬೀಳ್ತಾ ಇರೋ ದೃಶ್ಯ ಸೆರೆಯಾಗಿದೆ.
47 ಸೆಕೆಂಡ್ಗಳ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಹ ವೈರಲ್ ಆಗಿದೆ. ಜಲಪಾತದ ಮೇಲ್ಭಾಗದಲ್ಲಿರುವ ಕಲ್ಲಿನ ಮೇಲೆ ಕುಳಿತು ಯುವಕ ಫೋಟೋಗೆ ಪೋಸ್ ನೀಡುತ್ತಿದ್ದ. ಸ್ವಲ್ಪ ಮುಂದೆ ಬಂದು ಕ್ಲಿಕ್ಕಿಸುವಂತೆ ಸ್ನೇಹಿತನಿಗೆ ಸೂಚನೆ ಕೊಡುತ್ತ ಜಲಪಾತದ ಅಂಚಿನಲ್ಲಿರುವ ಜಾರು ಬಂಡೆಯ ಮೇಲೆ ಏರಿದ್ದಾನೆ. ಫೋಟೋಗೆ ಪೋಸ್ ನೀಡುತ್ತ ಮುಖವನ್ನು ಜಲಪಾತದ ಕಡೆ ತಿರುಗಿಸಿದ್ದಾನೆ.
ಕೆಲವೇ ಸೆಕೆಂಡ್ಗಳಲ್ಲಿ ಅಜಯ್ ಕಾಲು ಜಾರಿ ಸಮತೋಲನ ಕಳೆದುಕೊಂಡು ಜಲಪಾತದೊಳಗೆ ಬಿದ್ದಿದ್ದಾನೆ. ಬಂಡೆಯನ್ನು ಆಸರೆಯಾಗಿ ಹಿಡಿಯಲು ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ. ಕೆಲವೇ ಸೆಕೆಂಡ್ಗಳಲ್ಲಿ ಆತ ಜಲಪಾತದಲ್ಲಿ ಕಣ್ಮರೆಯಾಗಿದ್ದಾನೆ. ಅದನ್ನು ನೋಡಿ ವಿಡಿಯೋ ಮಾಡ್ತಿದ್ದ ಸ್ನೇಹಿತ ಕೂಗಿ ಅಳುತ್ತಿರುವುದು ಕೂಡ ದೃಶ್ಯದಲ್ಲಿ ಕೇಳಿಸಿದೆ.