ಕೊಡಗು : ಜಿಲ್ಲೆಯಲ್ಲಿ ಮತ್ತೆ ಮಹಾಮಾರಿಯ ಆತಂಕ ಶುರುವಾಗಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರಾಜ್ಯದ ಕೆಲವು ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಬೆಳಕಿಗೆ ಬರುತ್ತಿರುವ ಮಧ್ಯೆಯೇ ಜಿಲ್ಲೆಯ ಖಾಸಗಿ ಶಾಲೆಯ 9 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ನಗರದ ಖಾಸಗಿ ಶಾಲೆಯೊಂದರ 8 ಹಾಗೂ 9ನೇ ತರಗತಿಯ ಒಟ್ಟು 9 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತ ಮಕ್ಕಳ ಪ್ರಾಥಮಿಕ ಸಂಪರ್ಕಿತರಿಗೆ ಈಗಾಗಲೇ ಪರೀಕ್ಷೆ ಮಾಡಲಾಗಿದೆ. ಅಲ್ಲದೇ, ಶಾಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಆರಂಭದಲ್ಲಿ ಶಾಲಾ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆನಂತರ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಿತರನ್ನು ಟೆಸ್ಟ್ ಗೆ ಒಳಪಡಿಸಿದಾಗ 9 ಜನ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ, ಪಾಸಿಟಿವ್ ಬಂದ ವಿದ್ಯಾರ್ಥಿಗಳಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ.
ಹೀಗಾಗಿ ಸೋಂಕಿತ ವಿದ್ಯಾರ್ಥಿಗಳಿಗೆ ಅವರ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಮಕ್ಕಳ ಪ್ರಾಥಮಿಕ ಸಂಪರ್ಕಿತರಿಗೂ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ ಎಂದು ಕೊಡಗು ಡಿ ಎಚ್ ಒ ಡಾ. ವೆಂಕಟೇಶ್ ತಿಳಿಸಿದ್ದಾರೆ.