ವಿಧಾನ ಪರಿಷತ್ ಸಭಾಪತಿ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನ ಸಂದರ್ಭದಲ್ಲಿಯೇ ಅಂದರೆ ಡಿಸೆಂಬರ್ 21ರಂದು ಈ ಚುನಾವಣೆ ನಡೆಯಲಿದೆ.
ಬಿಜೆಪಿ ಈ ಹಿಂದೆ ಪಕ್ಷಕ್ಕೆ ಕರೆತರುವ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಅವರಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ನೀಡುವ ಭರವಸೆ ನೀಡಿದ್ದು, ಈ ಮಾತು ಉಳಿಸಿಕೊಳ್ಳುತ್ತಾ ಎಂಬ ಕುತೂಹಲ ಈಗ ಮನೆ ಮಾಡಿದೆ.
ಕಳೆದ ಅಧಿವೇಶನ ಸಂದರ್ಭದಲ್ಲಿಯೇ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿದ್ದು, ಆದರೆ ಕೆಲ ಹಿರಿಯ ಬಿಜೆಪಿ ನಾಯಕರು ಈ ಹಿಂದಿನಿಂದಲೂ ಪಕ್ಷದಲ್ಲಿ ಸೇವೆ ಸಲ್ಲಿಸಿದವರಿಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಚುನಾವಣೆ ರದ್ದಾಗಿತ್ತು.
ಇದೀಗ ಚುನಾವಣೆಗೆ ದಿನಾಂಕ ನಿಗದಿಯಾಗಿರುವುದರ ಮಧ್ಯೆ ಹಾಲಿ ವಿಧಾನ ಪರಿಷತ್ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ತಮ್ಮನ್ನೇ ಮುಂದುವರಿಸಬೇಕೆಂದು ಕೇಳುತ್ತಿದ್ದು, ಆದರೆ ಬಸವರಾಜ ಹೊರಟ್ಟಿ ಅವರನ್ನು ಪಕ್ಷಕ್ಕೆ ಕರೆತರುವ ವೇಳೆ ಸ್ಥಾನ ನೀಡುವ ಭರವಸೆ ನೀಡಿರುವುದರಿಂದ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.