ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಆಗಸ್ಟ್ 31ರಂದು ನಡೆದ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದ ವೇಳೆ ಬಿಜೆಪಿ ನಾಯಕರಿಗೆ ಹೆದರಿ ಸರ್ದಾರ್ ವಲ್ಲಭಬಾಯ್ ಪಟೇಲ್ ರಿಗೆ ಕಾಂಗ್ರೆಸ್ ನಾಯಕರು ಗೌರವ ತೋರಿದ ಘಟನೆ ನಡೆದಿದೆ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಗುಸು ಗುಸು ಸಂಭಾಷಣೆಯ ವಿಡಿಯೋ ಬಿಡುಗಡೆ ಮಾಡಿರುವ ರೇಣುಕಾಚಾರ್ಯ, ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್ ಕರ್ಮಕಥೆ ಎಂದು ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಮಾತ್ರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ವಲ್ಲಭ್ ಬಾಯ್ ಪಟೇಲ್ ಫೋಟೋ ಇಡಲು ಸೂಚನೆ ನೀಡಿದ್ದರು. ಇದಕ್ಕೆ ಡಿ.ಕೆ.ಶಿವಕುಮಾರ್ ನಾವು ಪುಣ್ಯಸ್ಮರಣೆ ಮಾತ್ರ ಮಾಡುತ್ತೇವೆ ಜನ್ಮಾಚರಣೆ ಮಾಡಲ್ಲ ಎಂದಿದ್ದರು.
ಇದಕ್ಕೆ ಸಿದ್ದರಾಮಯ್ಯನವರು. ಇದನ್ನೇ ಬಿಜೆಪಿಯವರು ಅಡ್ವಂಟೇಜ್ ತೆಗೆದುಕೊಂಡು ದೊಡ್ಡದು ಮಾಡುತ್ತಾರೆ ಎಂದಿದ್ದಾರೆ. ತಕ್ಷಣ ಸಿಬ್ಬಂದಿಗಳು ಪಟೇಲರ ಫೋಟೋವನ್ನು ಇಟ್ಟಿದ್ದಾರೆ. ಈ ಕುರಿತ ವಿಡಿಯೋ ಟ್ವೀಟ್ ಮಾಡಿರುವ ರೇಣುಕಾಚಾರ್ಯ ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್ ನಾಯಕರು ಎಂದು ವ್ಯಂಗ್ಯವಾಡಿದ್ದಾರೆ.