ಕೆಲವರಿಗೆ ಕೈಗಳ ಮೇಲೆ ರಕ್ತನಾಳಗಳು ಕಾಣಿಸುತ್ತವೆ. ಕೈಗಳಲ್ಲಿ ನರಗಳು ಗೋಚರಿಸೋದು ಸಾಮಾನ್ಯ ವಿಷಯ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಕೈಯಲ್ಲಿ ರಕ್ತನಾಳಗಳು ಉಬ್ಬಿ ಬಂದಿದ್ರೆ ಅದು ಕಾಯಿಲೆಯಂತೆ ಕಾಣಬಹುದು. ದೈನಂದಿನ ಚಟುವಟಿಕೆಗಳನ್ನು ಮಾಡಲು ಕಷ್ಟವಾಗಬಹುದು. ಅಷ್ಟಕ್ಕೂ ಈ ರೀತಿ ನರಗಳು ಕಾಣುವುದೇಕೆ ? ಅದರಿಂದ ಸಮಸ್ಯೆಗಳಿದ್ಯಾ ನೋಡೋಣ.
ತೂಕ ಇಳಿಕೆ: ಆರೋಗ್ಯ ತಜ್ಞರ ಪ್ರಕಾರ, ತೂಕ ನಷ್ಟವು ಕೈಯಲ್ಲಿ ರಕ್ತನಾಳಗಳು ಕಾಣಿಸಿಕೊಳ್ಳಲು ಒಂದು ಕಾರಣವಾಗಿರಬಹುದು. ಕಡಿಮೆ ತೂಕವಿರುವವರಲ್ಲಿ ಈ ರೀತಿ ರಕ್ತನಾಳಗಳು ಗೋಚರಿಸುತ್ತವೆ. ಕೈಯಲ್ಲಿರುವ ಕೊಬ್ಬು ಕಡಿಮೆಯಾದಾಗ ರಕ್ತನಾಳಗಳು ಹೊರಹೊಮ್ಮುತ್ತವೆ. ಇದು ಸಾಮಾನ್ಯವಾಗಿದ್ದರೂ, ಕೆಲವೊಮ್ಮೆ ಇದು ದೊಡ್ಡ ತೊಂದರೆಯ ಸಂಕೇತವಾಗಿರುತ್ತದೆ.
ವ್ಯಾಯಾಮ : ನೀವು ವ್ಯಾಯಾಮ ಮಾಡಿದಾಗ ರಕ್ತ ಪರಿಚಲನೆ ಹೆಚ್ಚುತ್ತದೆ. ಇದರಿಂದಾಗಿ ಕೈಗಳ ರಕ್ತನಾಳಗಳು ಗೋಚರಿಸುತ್ತವೆ. ಇದಲ್ಲದೆ, ನಾವು ಹೆಚ್ಚು ಭಾರವನ್ನು ಎತ್ತಿದಾಗ, ಸ್ನಾಯುಗಳಲ್ಲಿ ಒತ್ತಡ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಊದಿಕೊಳ್ಳುತ್ತವೆ. ಆದಾಗ್ಯೂ, ರಕ್ತ ಪರಿಚಲನೆಯು ಸಾಮಾನ್ಯವಾದಾಗ, ಅವು ಸಹ ಸಾಮಾನ್ಯವಾಗುತ್ತವೆ.
ಆನುವಂಶಿಕ: ನರಗಳು ಉಬ್ಬಿದಂತಾಗಿ ಕಾಣಿಸಿಕೊಳ್ಳಲು ಆನುವಂಶಿಕ ಕಾರಣವೂ ಇರುತ್ತದೆ. ನಿಮ್ಮ ಹೆತ್ತವರು ಅಥವಾ ಕುಟುಂಬಸ್ಥರ ಕೈಗಳು ಅದೇ ತೆರನಾಗಿದ್ದರೆ ನಿಮಗೂ ಅದೇ ರೀತಿಯಾಗುವ ಸಾಧ್ಯತೆ ಇರುತ್ತದೆ.
ವಯಸ್ಸು: ವಯಸ್ಸು ಹೆಚ್ಚಾದಂತೆಲ್ಲ ಕೈಗಳ ರಕ್ತನಾಳಗಳು ಸಹ ಹೊರಹೊಮ್ಮಲು ಪ್ರಾರಂಭಿಸುತ್ತವೆ. ವಯಸ್ಸಾದ ಮೇಲೆ ಸಹಜವಾಗಿಯೇ ಚರ್ಮವು ತೆಳ್ಳಗಾಗುತ್ತದೆ. ಇದು ಕೈಗಳಲ್ಲಿ ರಕ್ತನಾಳಗಳು ಹೆಚ್ಚು ಗೋಚರಿಸುವಂತೆ ಮಾಡುತ್ತದೆ. ವಯಸ್ಸಾದಂತೆ, ರಕ್ತನಾಳಗಳಲ್ಲಿನ ಕವಾಟಗಳು ದುರ್ಬಲಗೊಳ್ಳುತ್ತವೆ. ಇದರಿಂದಾಗಿ ರಕ್ತನಾಳಗಳಲ್ಲಿ ರಕ್ತ ಸಂಗ್ರಹವಾಗುತ್ತದೆ ಮತ್ತು ರಕ್ತನಾಳಗಳು ಉಬ್ಬುತ್ತವೆ.
ಉಬ್ಬಿರುವ ರಕ್ತನಾಳಗಳು : ಉಬ್ಬಿರುವ ರಕ್ತನಾಳಗಳು ಸಾಮಾನ್ಯವಾಗಿ ಕಾಲುಗಳ ಮೇಲೆ ಹೆಚ್ಚು ಗೋಚರಿಸುತ್ತವೆ. ಆದರೆ ಕೆಲವೊಮ್ಮೆ ಕೈಗಳಲ್ಲೂ ಕಾಣಬಹುದು. ರಕ್ತವು ನಾಳಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸಿದಾಗ ಉಬ್ಬುವಿಕೆ ಉಂಟಾಗುತ್ತದೆ. ಇದರಿಂದ ನೋವು ಇದ್ದರೆ ಚಿಕಿತ್ಸೆ ಪಡೆಯುವುದು ಅವಶ್ಯಕ.