ಶಿವಮೊಗ್ಗದ ಮಂತ್ರಿ ಮಗ ಕೇಸರಿ ಶಾಲುಗಳನ್ನು ತರಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿರುವ ಬೆನ್ನಲ್ಲೇ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಕೇಸರಿ ಶಾಲು ಹಂಚಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಕೇಸರಿ ಶಾಲು ಪೇಟಗಳನ್ನ ಧರಿಸುವುದು ನಮ್ಮ ಹಕ್ಕು. ಕೇಸರಿ ಧರಿಸಿ ಎಲ್ಲಿ ಬೇಕಾದರೂ ಹೋಗುವಂತಹ ಅಧಿಕಾರ ನಮಗಿದೆ. ಆದರೆ ಶಾಲೆಯಲ್ಲಿ ಎಲ್ಲರೂ ಸಮಾನರೇ ಅವರು ಸಮವಸ್ತ್ರ ಧರಿಸುವುದು ಸೂಕ್ತ ಎಂದಿದ್ದಾರೆ.
ಕೇಸರಿ ಧ್ವಜ ಹಾರಿಸಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕೇಸರಿ ಧ್ವಜವನ್ನು ಪ್ರಪಂಚದ ಯಾವ ಭಾಗದಲ್ಲಿ ಬೇಕಾದರೂ ಹಾರಿಸುತ್ತೇವೆ. ಅದನ್ನ ಕೇಳೊದಕ್ಕೆ ಇವರ್ಯಾರು. ಅವರು ಹೇಳಿದ ಹಾಗೇ ನಾವು ಸುಳ್ಳು ಹೇಳುವುದಿಲ್ಲಾ, ನಾವು ಕೇಸರಿ ಧ್ವಜ ಹಾರಿಸುವವರೆ. ಮುಂದಿನ ವರ್ಷಗಳಲ್ಲಿ ಭಾರತ ಹಿಂದೂ ರಾಷ್ಟ್ರವಾಗುತ್ತೆ ಆಗ ಕೆಂಪುಕೋಟೆಯಲ್ಲೂ ಭಗವಾ ಧ್ವಜವನ್ನು ಹಾರಿಸುತ್ತೇವೆ. ಹಾಗಂತ ನಮಗೆ ತ್ರಿವರ್ಣ ಧ್ವಜದ ಮೇಲೆ ಅಗೌರವ ಇಲ್ಲ. ಆದರೆ ಡಿಕೆ ಶಿವಕುಮಾರ್ ಆರೋಪಿಸಿರುವಂತೆ, ವಿದ್ಯಾರ್ಥಿಗಳು ತ್ರಿವರ್ಣ ಧ್ವಜವನ್ನು ಕಿತ್ತೆಸೆದು ಕೇಸರಿ ಧ್ವಜವನ್ನು ಹಾರಿಸಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು. ಸಿದ್ಧರಾಮಯ್ಯ ಅವರನ್ನ ಸುಳ್ಳುಗಾರ ಅಂದುಕೊಂಡಿದ್ದೆ ಆದರೆ ಡಿಕೆಶಿ ಅವರಿಗಿಂತ ಮಹಾ ಸುಳ್ಳುಗಾರ. ಅವರು ಸಾಕ್ಷ್ಯ ಒದಗಿಸಿ ಮಾತನಾಡಲಿ ಎಂದು ಈಶ್ವರಪ್ಪ ಸವಾಲಾಕಿದ್ದಾರೆ
ರಾಷ್ಟ್ರಧ್ವಜದ ಮೇಲೆ ಡಿಕೆಶಿಗಿಂತ ನಮ್ಮಗಳಿಗೆ ಹೆಚ್ಚು ಗೌರವವಿದೆ. ಕಾಂಗ್ರೆಸ್ ನವರು ಒಡೆದು ಆಳುವ ನೀತಿಯನ್ನ ಮತ್ತೆ ಶುರು ಹಚ್ಚಿಕೊಂಡಿದ್ದಾರೆ. ಅಲ್ಲಿ ತಿರಂಗ ಧ್ವಜ ಇರಲೇ ಇಲ್ಲ, ಅದನ್ನ ತಿರುಗಿಸಿ ರಾಷ್ಟ್ರಧ್ವಜವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.