ಇದು ಸ್ಟಾರ್ಟ್ ಅಪ್ ಕಾಲ. ಯುವ ಜನತೆ ಹೊಸತನವನ್ನು ಬಯಸ್ತಿದ್ದಾರೆ. ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಬದಲು ಸ್ವಂತ ಉದ್ಯೋಗ ಮಾಡಲು ಬಯಸ್ತಿದ್ದಾರೆ. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವಿಲ್ಲ, ಸರಿಯಾಗಿ ಸಂಬಳ ಬರ್ತಿಲ್ಲ, ಬಾಸ್ ಕಿರಿಕಿರಿ ಯಾವುದೂ ಇಲ್ಲದ ಸ್ವಂತ ಉದ್ಯೋಗಕ್ಕೆ ಕೈ ಹಾಕ್ತಿದ್ದಾರೆ.
ನೀವೂ ಸ್ವಂತ ಉದ್ಯೋಗ ಶುರು ಮಾಡುವ ಪ್ಲಾನ್ ನಲ್ಲಿದ್ದು, ಕೈನಲ್ಲಿ ಲಕ್ಷಗಟ್ಟಲೆ ಹಣವಿಲ್ಲ ಎಂದು ಚಿಂತೆ ಮಾಡುವ ಅಗತ್ಯವಿಲ್ಲ. ಲಕ್ಷಕ್ಕಿಂತ ಕಡಿಮೆ ಬಂಡವಾಳ ಹೂಡಿ ಕೈತುಂಬಾ ಹಣ ಗಳಿಸುವ ಕೆಲ ಉದ್ಯೋಗಗಳಿವೆ.
ಈವೆಂಟ್ ಫೋಟೋಗ್ರಾಫರ್ : ಈವೆಂಟ್ ಫೋಟೋಗ್ರಾಫರ್ ಆಗಲು ನಿಮಗೊಂದು ಕ್ಯಾಮರಾ ಬೇಕು. 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಕ್ಯಾಮರಾ ಖರೀದಿ ಮಾಡಬಹುದು. ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಕೈಚಳಕವಿರಬೇಕು. ಹುಟ್ಟುಹಬ್ಬ, ಮದುವೆ, ನಾಮಕರಣ ಸೇರಿದಂತೆ ಯಾವುದೇ ಸಮಾರಂಭದಲ್ಲಿ ಫೋಟೋಗ್ರಾಫರ್ ಬೇಕೇಬೇಕು. ಸ್ವಲ್ಪ ಜನರ ಸಂಪರ್ಕವಿದ್ದು, ಒಂದಿಷ್ಟು ಒಳ್ಳೆ ಫೋಟೋಗಳನ್ನು ತೆಗೆದಿದ್ದರೆ ತಾನಾಗಿಯೇ ನಿಮ್ಮ ಬ್ಯುಸಿನೆಸ್ ಬೆಳೆಯುತ್ತ ಹೋಗುತ್ತದೆ.
ಮೊಬೈಲ್ ಆಟೋ ಗ್ಯಾರೇಜ್ ಸರ್ವಿಸ್ : ನಗರದಲ್ಲೊಂದೇ ಅಲ್ಲ ಗ್ರಾಮೀಣ ಪ್ರದೇಶಗಳಲ್ಲೂ ಕಾರಿನ ಸಂಖ್ಯೆ ಹೆಚ್ಚಾಗಿದೆ. ಬೈಕ್ ನಂತೆ ಕಾರುಗಳೂ ಹಾಳಾಗುತ್ತವೆ. ಕಾರು ಯಾವ ಜಾಗದಲ್ಲಿ ಕೆಟ್ಟು ನಿಂತಿದೆಯೋ ಅಲ್ಲಿಯೇ ರಿಪೇರಿ ಮಾಡಿಸಲು ಮಾಲೀಕರು ಬಯಸ್ತಾರೆ. ಅವರಿಗಾಗಿ ನೀವು ಮೊಬೈಲ್ ಆಟೋ ಗ್ಯಾರೇಜ್ ಶುರು ಮಾಡಬಹುದು. ಇದಕ್ಕೆ ಸೆಕೆಂಡ್ ಹ್ಯಾಂಡ್ ಬೈಕ್ ಹಾಗೂ ರಿಪೇರಿಗೆ ಒಂದಿಷ್ಟು ಟೂಲ್ಸ್ ಬೇಕಾಗುತ್ತದೆ. ಮೆಕ್ಯಾನಿಕ್ ನಲ್ಲಿ ನಿಮಗೆ ಆಸಕ್ತಿಯಿದ್ದರೆ ಇದನ್ನು ಆರಾಮವಾಗಿ ಶುರು ಮಾಡಬಹುದು. ಅವಶ್ಯವೆನಿಸಿದ್ರೆ ಒಬ್ಬ ಮೆಕ್ಯಾನಿಕ್ ನನ್ನು ಕೆಲಸಕ್ಕೆ ಇಟ್ಟುಕೊಳ್ಳಬಹುದು.
ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ : ಭಾರತದಲ್ಲಿ ಹೊಸ ಕಾರಿನ ಜೊತೆ ಹಳೆ ಕಾರಿಗೂ ಬೇಡಿಕೆ ಹೆಚ್ಚಿದೆ. ಹಾಗಾಗಿ ನೀವು ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಬಹುದು. ಇದ್ರಲ್ಲಿ ಕಮಿಷನ್ ಸಿಗುತ್ತದೆ.
ಡ್ರೈವಿಂಗ್ ಸ್ಕೂಲ್ : ಕಾರು ಅಥವಾ ಬೈಕ್ ಚಾಲನೆ ನಿಮಗೆ ಬಂದ್ರೆ ಈ ಕೆಲಸವನ್ನು ಶುರು ಮಾಡಬಹುದು. ಕಾರು ಹಾಗೂ ಬೈಕ್ ಕಲಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅವಶ್ಯವಿರುವವರಿಗೆ ಕಾರು, ಬೈಕ್ ಕಲಿಸಿ ಹಣ ಸಂಪಾದನೆ ಮಾಡಬಹುದು.
ಐಸ್ ಕ್ರೀಂ ಪಾರ್ಲರ್ : ಐಸ್ ಕ್ರೀಂ ಪಾರ್ಲರ್ ಕೂಡ ಒಳ್ಳೆ ಹೂಡಿಕೆ. ಚಳಿಗಾಲ ಹೊರತುಪಡಿಸಿ ಉಳಿದ ಎಲ್ಲ ಸಮಯದಲ್ಲೂ ಐಸ್ ಕ್ರೀಂಗೆ ಬಹು ಬೇಡಿಕೆಯಿದೆ. ಐಸ್ ಕ್ರೀಂ ಪಾರ್ಲರ್ ಕಡಿಮೆಯಿರುವ ಅಥವಾ ಒಳ್ಳೆ ಕಂಪನಿಯ ಫ್ರ್ಯಾಂಚೈಸಿ ಪಡೆದಿದ್ದರೆ ಸುಲಭವಾಗಿ ಐಸ್ ಕ್ರೀಂ ಪಾರ್ಲರ್ ನಡೆಸಬಹುದು.