ಬೋರಿಸ್ ಜಾನ್ಸನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗಿದ್ದ ಲಿಜ್ ಟ್ರಸ್ ಕೇವಲ 45 ದಿನಗಳಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಅತ್ಯಂತ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆಯಲ್ಲಿದ್ದ ಅಪಕೀರ್ತಿಗೆ ಅವರು ಒಳಗಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ತಮ್ಮ ಎದುರಾಳಿ ಭಾರತೀಯ ಮೂಲದ ರಿಷಿ ಸುನಾಕ್ ಅವರನ್ನು ಪರಾಭವಗೊಳಿಸಿದ್ದ ಲಿಜ್ ಟ್ರಸ್ ಹಳಿ ತಪ್ಪಿದ್ದ ಬ್ರಿಟನ್ ಆರ್ಥಿಕತೆಯನ್ನು ಮತ್ತೆ ಸುಸ್ಥಿತಿಗೆ ತರಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ ತೆರಿಗೆ ಕಡಿತದ ವಿವಾದಾತ್ಮಕ ಯೋಜನೆಯಿಂದ ಉದ್ಭವಿಸಿದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ.
ಲಿಜ್ ಟ್ರಸ್ ಕೇವಲ 45 ದಿನಗಳ ಕಾಲ ಅಧಿಕಾರದಲ್ಲಿದ್ದರೂ ಸಹ ಪ್ರತಿ ವರ್ಷ ಸರ್ಕಾರದ ಬೊಕ್ಕಸದಿಂದ 1.05 ಕೋಟಿ ರೂಪಾಯಿಗಳನ್ನು ಭತ್ಯೆಯಾಗಿ ಪಡೆಯಲಿದ್ದಾರೆ. ಅವರು ಬ್ರಿಟನ್ ಪ್ರಧಾನಿಯಾಗಿದ್ದ ಕಾರಣ ನಿಯಮಗಳ ಅನುಸಾರ ಇದಕ್ಕೆ ಅರ್ಹರಾಗಿದ್ದಾರೆ. ಆದರೆ ದೇಶ ಪ್ರಸಕ್ತ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಕಾರಣ ಲಿಜ್ ಟ್ರಸ್ ಇದನ್ನು ಬಿಟ್ಟು ಕೊಡಬೇಕೆಂಬ ಮಾತುಗಳು ಕೇಳಿ ಬರುತ್ತಿದ್ದು, ಯಾವ ನಿರ್ಧಾರ ತಳೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.