ಉಳಿತಾಯ ಖಾತೆ ತೆರೆಯುವ ನೆಪದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಬಂದಿದ್ದ ಶಸ್ತ್ರಸಜ್ಜಿತ ದರೋಡೆಕೋರರ ಗುಂಪು ಕೇವಲ 4 ನಿಮಿಷಗಳ ಅವಧಿಯಲ್ಲಿ 13 ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಪಂಜಾಬ್ ನ ಮುಲನ್ಪುರ್ ಡಾಕಾದ ದೇತ್ವಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದರೋಡೆ ನಡೆದ ಸಂದರ್ಭದಲ್ಲಿ ಕೇವಲ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಕಳೆದ ಎರಡು ವರ್ಷಗಳಿಂದ ಈ ಬ್ಯಾಂಕಿಗೆ ಭದ್ರತಾ ಸಿಬ್ಬಂದಿಯನ್ನೇ ನೇಮಿಸಿರಲಿಲ್ಲವೆಂಬ ಸಂಗತಿ ಈಗ ಬಯಲಾಗಿದೆ.
ದರೋಡೆಕೋರರ ಪೈಕಿ ಇಬ್ಬರು ಗನ್ ಗಳನ್ನು ಹೊಂದಿದ್ದರೆ, ಮತ್ತೊಬ್ಬನ ಬಳಿ ಹರಿತವಾದ ಆಯುಧವಿತ್ತು. ಗನ್ ತೋರಿಸಿ ಸಿಬ್ಬಂದಿಯನ್ನು ಬೆದರಿಸಿದ ದರೋಡೆಕೋರರು 13 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಅಲ್ಲದೇ ಪೊಲೀಸರಿಗೆ ಕರೆ ಮಾಡಬಾರದೆಂಬ ಕಾರಣಕ್ಕೆ ಸಿಬ್ಬಂದಿಯ ಮೊಬೈಲ್ ಫೋನ್ ಗಳನ್ನೂ ಕಸಿದುಕೊಂಡಿದ್ದಾರೆ.
ಪರಾರಿಯಾಗುವ ಮುನ್ನ ಕಿಟಕಿ ಮೂಲಕ ಸಿಬ್ಬಂದಿಯ ಮೊಬೈಲ್ ಗಳನ್ನು ಎಸೆದಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆಘಾತಕಾರಿ ಸಂಗತಿಯೆಂದರೆ ಕೃತ್ಯ ನಡೆಯುವ ಕೇವಲ ಒಂದೆರೆಡು ಗಂಟೆ ಮುನ್ನ ಈ ಪ್ರದೇಶದಲ್ಲಿ ಪೊಲೀಸರು ಕವಾಯತು ನಡೆಸಿದ್ದರು ಎನ್ನಲಾಗಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.