ಬೆಳಕಿನ ನಗರಿ ಪ್ಯಾರಿಸ್, ಪ್ರವಾಸಿಗರ ಪಾಲಿನ ಸ್ವರ್ಗ. ಸಾಹಿತ್ಯ ಮತ್ತು ಕಲಾ ಪ್ರೇಮಿಗಳಿಗೆ ಇಷ್ಟವಾಗುವಂತಹ ಸುಂದರ ತಾಣವಿದು. ಪ್ರಪಂಚದ ಫ್ಯಾಷನ್ ರಾಜಧಾನಿ ಎನಿಸಿಕೊಂಡಿದೆ. ಸೀನ್ ನದಿಯ ಮೇಲೆ ನೆಲೆನಿಂತಿರೋ ಪ್ಯಾರಿಸ್, ಜೋಡಿಹಕ್ಕಿಗಳಿಗೆ ಮಾತ್ರವಲ್ಲ, ಸೋಲೋ ಟ್ರಿಪ್ ಗೆ ಹೋಗುವವರಿಗೆ ಇಷ್ಟವಾಗುವಂತಿದೆ.
ಇಲ್ಲಿನ ಕೆಫೆಗಳು, ಭವ್ಯವಾದ ಸ್ಕೈಲೈನ್ ವೀಕ್ಷಣೆಯ ತಾಣಗಳು, ಕ್ಯಾಥೆಡ್ರಲ್, ಸಾಂಪ್ರದಾಯಿಕ ಐಫೆಲ್ ಟವರ್ ಹೀಗೆ ಹತ್ತಾರು ತಾಣಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಪ್ಯಾರಿಸ್ ಸುತ್ತಾಡಲು ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿಲ್ಲ. ಕೇವಲ 35,000 ರೂಪಾಯಿ ಇದ್ದರೆ 5 ದಿನಗಳ ಕಾಲ ಪ್ಯಾರಿಸ್ ನಲ್ಲಿ ಕಾಲ ಕಳೆಯಬಹುದು.
ಇದಕ್ಕೆಂದೇ ಪ್ಯಾರಿಸ್ ನಲ್ಲಿ ಅನೇಕ ಬಜೆಟ್ ಸ್ನೇಹಿ ಹಾಸ್ಟೆಲ್ ಮತ್ತು ಶೇರಿಂಗ್ ಡೊರ್ಮ್ ಗಳಿವೆ. ಪುರುಷರು ಮತ್ತು ಮಹಿಳೆಯರು ಇದನ್ನು ಶೇರ್ ಮಾಡಿಕೊಳ್ಳಬಹುದು. ಈ ಹೋಟೆಲ್ ಗಳಲ್ಲಿ ಒಂದು ರಾತ್ರಿಗೆ ಕೇವಲ 2000-2500 ರೂಪಾಯಿ ವೆಚ್ಚ ಮಾಡಿ ಉಪಹಾರ, ಲೌಂಜ್, ಲೈವ್ ಡಿಜೆ ಎಲ್ಲವನ್ನೂ ಎಂಜಾಯ್ ಮಾಡಬಹುದು.
ಆದ್ರೆ ಪ್ಯಾರಿಸ್ ನ ಕೆಲವು ಪ್ರದೇಶದಲ್ಲಿ ಕ್ರೈಮ್ ಜಾಸ್ತಿ ಇರೋದ್ರಿಂದ ಬುಕ್ಕಿಂಗ್ ಸಂದರ್ಭದಲ್ಲಿ ಅದರ ಬಗ್ಗೆ ವಿಶೇಷ ಗಮನ ಹರಿಸಿ. ಸಿಟಿ ಸುತ್ತಾಡಲು ನಿಮಗೆ ಮೆಟ್ರೋ ಹಾಗೂ ಬಸ್ ಸೇವೆಯಿದೆ. ಇವುಗಳ ಟಿಕೆಟ್ ದರ ಕೂಡ ಹೆಚ್ಚೆಂದರೆ 160 ರೂಪಾಯಿ ಇರುತ್ತದೆ. 2-3 ದಿನಗಳಿಗೆ ಡಬಲ್ ಡೆಕ್ಕರ್ ಬಸ್ ಗಳಲ್ಲಿ ನಗರ ವೀಕ್ಷಣೆ ಮಾಡಲು ಪಾಸ್ ಕೂಡ ತೆಗೆದುಕೊಳ್ಳಬಹುದು.
ನೀವು ವಿಸಿಟ್ ಮಾಡಲೇಬೇಕಾದ ಸ್ಥಳಗಳೆಂದರೆ ಐಫೆಲ್ ಟವರ್ ಮತ್ತು ಸೀನ್ ನದಿಯ ತಟ. ಐಫೆಲ್ ಟವರ್ ನ ಮೊದಲನೇ ಮಹಡಿಗೆ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡ್ರೆ ಇಡೀ ನಗರವನ್ನು ವೀಕ್ಷಿಸಬಹುದು. ಇನ್ನು ಸೀನ್ ನದಿ ವೀಕ್ಷಣೆಗೆ ನಿಮಗೆ 1500 ರೂಪಾಯಿ ಖರ್ಚಾಗುತ್ತದೆ. ಕೆಲವೊಮ್ಮೆ ಫ್ರೀಯಾಗಿ ನೋಡುವ ಅವಕಾಶವೂ ಸಿಗಬಹುದು. ಐಫೆಲ್ ಟವರ್ ನ ತುತ್ತ ತುದಿಗೆ ಹೋಗಬೇಕಂದ್ರೆ 6000 ರೂಪಾಯಿ ಖರ್ಚಾಗುತ್ತದೆ. ಎರಡನೇ ಮಹಡಿ ಸಾಕು ಎನಿಸಿದ್ರೆ 3000 ರೂಪಾಯಿಯಲ್ಲೇ ಮುಗಿದು ಹೋಗುತ್ತದೆ.
ನೀವು ಶಾಪಿಂಗ್ ಪ್ರಿಯರಾಗಿದ್ದರೆ ಚಾಂಪ್ಸ್ ಎಲಿಸೀಸ್ ಗೆ ಭೇಟಿ ಕೊಡಿ. ಅಲ್ಲಿ ಎಲ್ಲಾ ಜನಪ್ರಿಯ ಬ್ರಾಂಡ್ ನ ವಸ್ತುಗಳು ದೊರೆಯುತ್ತವೆ. ಪ್ಯಾರಿಸ್ ನ ಜನಪ್ರಿಯ ಕ್ಯಾಥೆಡ್ರಲ್, ನೋಟ್ರೆ ಡೇಮ್ ಡೆ ಪ್ಯಾರಿಸ್ ಗೆ ಭೇಟಿ ಕೊಡಲು ಪ್ರವೇಶ ಶುಲ್ಕವೇ ಇಲ್ಲ. ಜಗತ್ತಿನ ಅತಿ ದೊಡ್ಡ ಕಲಾ ಮ್ಯೂಸಿಯಂ ಲೌವ್ರೆಗೆ ಹೋದ್ರೆ ಐತಿಹಾಸಿಕ ಮೊನಾಲಿಸಾಳ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು. ಸರತಿ ಸಾಲಿನಲ್ಲಿ ನಿಂತು ಕಾಯುವುದು ಅಸಾಧ್ಯ ಎನಿಸಿದ್ರೆ 1500 ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಬಹುದು.
ಮೌಲಿನ್ ರೋಗ್ ನಲ್ಲಿ ಪರ್ಶಿಯನ್ ಡಾನ್ಸ್ ಆಸ್ವಾದಿಸುತ್ತ, ಆರಾಮಾಗಿ ಕುಳಿತು ರುಚಿಕರ ಡಿನ್ನರ್ ಸವಿಯಲು 7900 ರೂಪಾಯಿ ಖರ್ಚಾಗುತ್ತದೆ. ಪ್ಯಾರಿಸ್ ನಿಂದ 30 ಕಿಮೀ ದೂರದಲ್ಲಿರೋ ಡಿಸ್ನಿ ಲ್ಯಾಂಡ್ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಸುತ್ತಾಡಿದ್ರೂ ನಿಮಗೆ ಖರ್ಚಾಗೋದು ಕಡಿಮೆ. ಸ್ವಲ್ಪ ಅಳೆದು ತೂಗಿ ಖರ್ಚು ಮಾಡಿದ್ರೆ ಅತಿ ಕಡಿಮೆ ಹಣದಲ್ಲಿ ಪ್ಯಾರಿಸ್ ನಂತಹ ಸುಂದರ ಸ್ಥಳವನ್ನು ಕಣ್ತುಂಬಿಕೊಂಡು ಬರಬಹುದು.