40 ವರ್ಷದ ಮಹಿಳೆಯೊಬ್ಬರು ಕೇರಳದಿಂದ ಕಾಶ್ಮೀರಕ್ಕೆ ಕಾರ್ಗೋ ಲಾರಿಯನ್ನು ಚಾಲನೆ ಮಾಡುವ ಮುಖಾಂತರ ಎಲ್ಲರ ಹುಬ್ಬೇರಿಸಿದ್ದಾರೆ.
ಕೇರಳದ ಎರ್ನಾಕುಲಂ ಜಿಲ್ಲೆಯಿಂದ ತನ್ನ ಕನಸಿನ ತಾಣವಾದ ಕಾಶ್ಮೀರಕ್ಕೆ ಸರಕು ಲಾರಿಯನ್ನು ಚಾಲನೆ ಮಾಡಿದ್ದಾರೆ. 40 ವರ್ಷದ ಜೆಲಜಾ ರತೀಶ್ ಈ ಸಾಧನೆ ಮಾಡಿದವರು. ಸಾಮಾನ್ಯವಾಗಿ ಜನರು ಪ್ರಯಾಣಕ್ಕೆ ಕಾರು ಅಥವಾ ಬೈಕು ಆಯ್ಕೆ ಮಾಡುತ್ತಾರೆ. ಆದರೆ, ಜೆಲಾಜಾ ಅವರ ವಾಹನದ ಆಯ್ಕೆಯು ನೆಟ್ಟಿಗರನ್ನು ಆಶ್ಚರ್ಯಗೊಳಿಸಿದೆ.
ಜೆಲಜಾ ಅವರು ಪತಿ ರತೀಶ್ ಪಿ.ಎಸ್. ಮತ್ತು ಸಂಬಂಧಿ ಅನೀಶ್ ಕೆ.ಎಸ್. ಅವರೊಂದಿಗೆ ಪ್ರಯಾಣ ಬೆಳೆಸಿದ್ದಾರೆ.
ತಾನು ಚಲನಚಿತ್ರಗಳಲ್ಲಿ ನೋಡುವ ಸ್ಥಳಗಳನ್ನು ನೈಜವಾಗಿ ವೀಕ್ಷಿಸಲಿದ್ದೇನೆ. ಇದು ಯಾವುದೇ ಬಸ್ ಅಥವಾ ಕಾರಿನಲ್ಲಲ್ಲ. ಲಾರಿಯಲ್ಲಿ ಪ್ರಯಾಣಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್‌ಗಳಲ್ಲಿ ಪ್ರಯಾಣಿಸುವಾಗ ಪ್ರಕೃತಿಯ ವೈಶಿಷ್ಟ್ಯತೆಗೆ ಅವರು ಬೆರಗುಗೊಂಡಿದ್ದಾರೆ. ಅಲ್ಲದೆ ಸರಕು ಸಾಗಣೆ ಲಾರಿಯನ್ನು ಮಹಿಳೆ ಚಲಾಯಿಸುತ್ತಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಜನರು ಈಕೆಯನ್ನು ಆಶ್ಚರ್ಯದಿಂದ ನೋಡುತ್ತಿದ್ದು, ಇದು ತನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಲಾರಿಯೊಳಗೆ ಮಲಗಬಹುದಾಗಿರುವುದರಿಂದ ಪ್ರಯಾಣವು ಆಯಾಸದಾಯಕವಾಗಿಲ್ಲ ಎಂದು ಅವರು ಹೇಳಿದ್ದಾರೆ. ಗುಲ್ಮಾರ್ಗ್ ಭೇಟಿಯು ತಮ್ಮ ಪ್ರಯಾಣದ ಅತ್ಯಂತ ಸ್ಮರಣೀಯ ಭಾಗವಾಗಿತ್ತು ಎಂದು ಅವರು ಹೇಳಿದ್ದಾರೆ.
https://www.youtube.com/watch?v=PBqsC-p71vg