
ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಶೇ.34 ರಿಂದ ಶೇ.38ಕ್ಕೆ ಏರಿಸಲಾಗಿದೆ ಎಂಬ ಪ್ರಕಟಣೆಯೊಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಆದ್ರೆ ಈ ಪ್ರಕಟಣೆ ನಕಲಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಡಿಎ ಹೆಚ್ಚಳದ ಬಗ್ಗೆ ಯಾವುದೇ ಆದೇಶವನ್ನೂ ನೀಡಿಲ್ಲ ಎಂದು ಹೇಳಿದೆ.
ತುಟ್ಟಿಭತ್ಯೆಯ ಹೆಚ್ಚುವರಿ ಕಂತು 01.07.2022 ರಿಂದ ಜಾರಿಗೆ ಬರಲಿದೆ ಎಂದು WhatsApp ನಲ್ಲಿ ನಕಲಿ ಆದೇಶ ಪ್ರಸಾರವಾಗುತ್ತಿದೆ. ಇಲಾಖೆಯು ಅಂತಹ ಯಾವುದೇ ಆದೇಶವನ್ನು ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸ್ಪಷ್ಟನೆ ನೀಡಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರಿ ನೌಕರರು, ವೈರಲ್ ಆಗಿರುವ ಪ್ರಕಟಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ.
“ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇಕಾದ ತುಟ್ಟಿಭತ್ಯೆಯನ್ನು 2022ರ ಜುಲೈ 1 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ.34 ರಿಂದ ಶೇ.38ಕ್ಕೆ ಹೆಚ್ಚಳ ಮಾಡಲು ರಾಷ್ಟ್ರಪತಿಗಳು ಸಂತೋಷಪಡುತ್ತಾರೆ” ಎಂದು ವೈರಲ್ ಆಗಿರುವ ‘ನಕಲಿ’ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತುಟ್ಟಿಭತ್ಯೆ ಎಂದರೇನು?
ಡಿಎ ಅಥವಾ ತುಟ್ಟಿ ಭತ್ಯೆಯು ಜೀವನ ವೆಚ್ಚದ ಹೊಂದಾಣಿಕೆ ಭತ್ಯೆಯಾಗಿದೆ. ಸಾರ್ವಜನಿಕ ವಲಯದ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರವು ಇದನ್ನು ಪಾವತಿಸುತ್ತದೆ. ಸಂಬಳದ ಡಿಎ ಅಂಶವು ಭಾರತ ಮತ್ತು ಬಾಂಗ್ಲಾದೇಶದ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.