ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಗೆ ಯುವಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಹರಿಯಾಣದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಬಿಹಾರದಲ್ಲಿ ಪ್ರತಿಭಟನೆ ಉಗ್ರ ರೂಪ ಪಡೆದುಕೊಂಡಿದ್ದು, ರೈಲುಗಳಿಗೆ ಬೆಂಕಿ ಹಚ್ಚಿ ಬಸ್ ಗಳು ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಹರಿಯಾಣದಲ್ಲೂ ಸಹ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಿದ್ದಾರೆ. ಬಿಹಾರದಲ್ಲಿ ರೈಲ್ವೆ ನಿಲ್ದಾಣಗಳು ಪ್ರತಿಭಟನೆಯ ಕೇಂದ್ರಗಳಾಗಿರುವ ಕಾರಣ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಇದರ ಮಧ್ಯೆ ಯೋಜನೆ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಅಗ್ನಿಪಥ ಯೋಜನೆಯ ಮೂಲಕ ಸೇನೆ ಸೇರಿದ ಯುವಕರಿಗೆ ಖಾಸಗಿ ಕ್ಷೇತ್ರದಲ್ಲೂ ವಿಪುಲ ಅವಕಾಶಗಳಿವೆ ಎಂದು ಹೇಳಿದೆ. ಅಲ್ಲದೆ ನಾಲ್ಕು ವರ್ಷಗಳ ಸೇವೆಯ ಬಳಿಕ ದೊರೆಯುವ ನಿಧಿಯಿಂದಾಗಿ ಉದ್ಯಮಿಗಳಾಗಿ ಬೆಳೆಯುವ ಅವಕಾಶಗಳು ಇದೆ ಎಂದು ತಿಳಿಸಿದೆ.