ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಜೊತೆ ಹತ್ತಿರದ ಸಂಬಂಧವನ್ನು ಹೊಂದಿರುವ ವಿದೇಶಿ ಮೂಲದ ಪಂಜಾಬ್ ಪಾಲಿಟಿಕ್ಸ್ ಟಿವಿಯ ಎಲ್ಲಾ ಅಪ್ಲಿಕೇಶನ್, ವೆಬ್ಸೈಟ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ಖಾತೆಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧಿಕೃತ ಆದೇಶವನ್ನು ನೀಡಿದೆ.
ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಈ ಸೋಶಿಯಲ್ ಮೀಡಿಯಾ ಖಾತೆಗಳಿಂದ ಶಾಂತಿ ಕದಡುವ ಕೆಲಸವಾಗಬಾರದು ಎಂಬ ನಿಟ್ಟಿನಲ್ಲಿ ಕೇಂದ್ರ ಸಚಿವಾಲಯ ಈ ನಿರ್ಧಾರವನ್ನು ಕೈಗೊಂಡಿದೆ.
ಗುಪ್ತಚರ ಇಲಾಖೆಯ ಮಾಹಿತಿಗಳನ್ನು ಪರಿಶೀಲಿಸಿದ ನಂತರ ಮಾಹಿತಿ ತಂತ್ರಜ್ಞಾನ ನಿಯಮಗಳ ತುರ್ತು ಅಧಿಕಾರವನ್ನು ಬಳಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಂಜಾಬ್ ಪಾಲಿಟಿಕ್ಸ್ ಟಿವಿಯ ಡಿಜಿಟಲ್ ಮಾಧ್ಯಮಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಆದೇಶ ನೀಡಿದೆ.
ಪ್ರಸ್ತುತ ದೇಶದ ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಪಂಜಾಬ್ನಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಆನ್ಲೈನ್ ಮಾಧ್ಯಮಗಳನ್ನು ಬಳಸಿಕೊಳ್ಳಲು ಪಂಜಾಬ್ ಪಾಲಿಟಿಕ್ಸ್ ಟಿವಿ ಪ್ರಯತ್ನಿಸುತ್ತಿತ್ತು ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.