ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರಿಗೆ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇರೆಗೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಸಚಿವರು ಆರೋಪಿಸಿದ್ದರು.
ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಿಪಿಓ ಕೆಲಸ ಮಾಡುತ್ತಿದ್ದ ಐವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಓರ್ವ ದೆಹಲಿ ಮೂಲದವನಾಗಿದ್ದರೆ, ನಾಲ್ವರು ನೋಯ್ಡಾದವರು ಎನ್ನಲಾಗಿದೆ.
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಹತ್ತಿರ ಪುರಾವೆಗಳು ಇವೆ ಎಂದು ಬಂಧಿತರು ಹೇಳಿ, ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ್ದರು ಎಂದು ವರದಿಯೊಂದು ತಿಳಿಸಿದೆ.
ಬ್ಲಾಕ್ ಮೇಲ್ ಕುರಿತು ಕೇಂದ್ರ ಸಚಿವ ಅಜಯ್ ಮಿಶ್ರಾ ಇತ್ತೀಚೆಗೆ ಆರೋಪಿಸಿದ್ದರು. ಅಕ್ಟೋಬರ್ ನಲ್ಲಿ ಸಚಿವರ ಪುತ್ರ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿ, ಅವರ ಸಾವಿಗೆ ಕಾರಣವಾಗಿರುವ ಆರೋಪ ಎದುರಿಸುತ್ತಿದ್ದು, ಸದ್ಯ ಜೈಲಿನಲ್ಲಿದ್ದಾನೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಬಂಧಿತರು ಸಚಿವರಿಗೆ ಕರೆ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಅವರ ಸಿಬ್ಬಂದಿ ದೂರು ನೀಡಿದ್ದರು. ಈ ಕುರಿತು ದೆಹಲಿಯಲ್ಲಿ ಎಫ್ಐಆರ್ ದಾಖಲಾಗಿತ್ತು.