ಶಿವಮೊಗ್ಗ: ಕೇಂದ್ರ, ರಾಜ್ಯದ ನಡುವೆ ಹೊಂದಾಣಿಕೆ ಇರಬೇಕು. ಆದರೆ, ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಕೇಳುತ್ತಿರೋದು ಹೊಟ್ಟೆಗೆ ಅನ್ನ ಹೊರತು, ಬೇರೆ ಏನೂ ಕೇಳುತ್ತಿಲ್ಲ. ನಾವು ಬೇರೆ ಏನೂ ವ್ಯಾಪಾರ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿರಲಿ ಈಗ ನೋಡಿದ್ರೆ 15 ಕೆಜಿ ಕೊಡಿ ಅಂತಿದ್ದಾರೆ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ದೂರಿದರು.
ಸೋತಾಗ ಸಹಜವಾಗಿ ಎಲ್ರೂ ಮಾತಾಡ್ತಾರೆ. ಅದನ್ನೇ ಬಿಜೆಪಿ ಮಾಡುತ್ತಿದೆ. ಜನರು ಕೂಡ ಇದನ್ನು ಗಮನಿಸ್ತಾರೆ. ಗ್ಯಾರಂಟಿ ನೀಡೋದ್ರ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. 10 ಕೆ.ಜಿ ಕೊಟ್ಟೇ ಕೊಡುತ್ತೇವೆ. ಕೇಂದ್ರಕ್ಕೆ ಅತಿ ಹೆಚ್ಚು 3 ಲಕ್ಷ ಕೋಟಿಯಷ್ಟು ಜಿಎಸ್ಟಿ ತೆರಿಗೆ ರಾಜ್ಯದಿಂದಲೇ ಹೋಗುತ್ತೆ. ಅದ್ರೇ, ಅವರು ನಮಗೆ 50-60 ಸಾವಿರ ಕೋಟಿ ಕೊಡ್ತಾರೆ ಅಷ್ಟೇ ಎಂದರು.
ಇದನ್ನೆಲ್ಲಾ ನಾವು ಹೇಳ್ಬೇಕು ಅಲ್ವಾ ? ಬಹುಪಾಲು ತೆರಿಗೆ ತಗೋಳ್ತಾರಲ್ವಾ ? ನನ್ನ ಇಲಾಖೆಯದ್ದೇ ನಾನು ಹೇಳ್ತೇನೆ. ಶಿಕ್ಷಣಕ್ಕೆ ಪ್ರತಿ ವಿದ್ಯಾರ್ಥಿಗೆ ಕೇಂದ್ರದಿಂದ ಎರಡೂವರೆ ಸಾವಿರದಷ್ಟು ಕೊಡ್ತಾರೆ. ಅದೇ ಗುಜರಾತ್ ಸೇರಿದಂತೆ ಬೇರೆ ರಾಜ್ಯಕ್ಕೆ ಪ್ರತಿ ವಿದ್ಯಾರ್ಥಿಗೆ 6500 ರೂ. ವರೆಗೂ ಕೊಡ್ತಾರೆ. ಇಲ್ಲೂ ತಾರತಮ್ಯ ಮಾಡುತ್ತಾರೆ ಎಂದರು.
ಕೇಂದ್ರಕ್ಕೆ ಇಷ್ಟು ಜಿಎಸ್ಟಿ ಕೊಡುವಾಗ ಅವರಿಗೂ ಮಾನವೀಯತೆ ಇರಬೇಕಲ್ವಾ? ಗೆದ್ದಿರುವ 25 ಜನ ಸಂಸದರು ಏನು ಮಾಡ್ತಿದ್ದಾರೆ. ಬಿಜೆಪಿ ಸಂಸದರು ನಮ್ಮ ಪಾಲಿನ ಜಿಎಸ್‌ಟಿಯನ್ನು ಹೋಗಿ ಯಾವಾಗಾದ್ರೂ ಕೇಳಿದ್ದಾರಾ ? ಇಲ್ಲಿ ಬಂದು ಅಕ್ಕಿ ವಿಚಾರವಾಗಿ ಮಾತಾಡ್ತಾರೆ. ಲೆಕ್ಕ ಕೇಳ್ತಾರೆ. ಅಕ್ಕಿಗೂ ಮೋಸ ಮಾಡಿ, ಜನರನ್ನು ಹಾದಿ ತಪ್ಪಿಸುವ ವ್ಯವಸ್ಥೆ ಮಾಡ್ತಿದ್ದಾರೆ ಎಂದ ಅವರು, ಬಿಜೆಪಿಯರು ಕೆಟ್ಟ ಬುದ್ದಿ ನಿಲ್ಲಿಸಿ, ಇನ್ನಾದರೂ ಒಳ್ಳೆಯ ಬುದ್ಧಿ ಕಲಿಯಲಿ ಎಂದರು.
ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ನಾನು ಮಾತನಾಡಲ್ಲ. ನಾವು ಪ್ರಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇವೆ. ಅದನ್ನು ಓದಲಿ. ಎಂದರು.