ಕೇಂದ್ರ ಸರ್ಕಾರವು ನನ್ನ ಮಕ್ಕಳ ಇನ್ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗಂಭೀರ ಆರೋಪವನ್ನು ಮಾಡಿದ್ದಾರೆ.
ಮಹಿಳಾ ಸಬಲೀಕರಣಕ್ಕೆಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ, ಪ್ರಧಾನಿ ಮೋದಿಯ ಪ್ರಯಾಗ್ರಾಜ್ ಭೇಟಿಯ ಕುರಿತು ಮಾತನಾಡುತ್ತಾ ಈ ಹೇಳಿಕೆಯನ್ನು ನೀಡಿದ್ದಾರೆ.
ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಮೊದಲು ಪ್ರಶ್ನೆ ಮಾಡಿದ್ದ ಫೋನ್ ಕದ್ದಾಲಿಕೆಯ ವಿಚಾರದ ಬಗ್ಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಅಲ್ಲದೇ ಈ ಕೇಂದ್ರ ಸರ್ಕಾರವು ಫೋನ್ ಕದ್ದಾಲಿಕೆ ಮಾಡೋದು ಹಾಗಿರಲಿ. ನನ್ನ ಮಕ್ಕಳ ಇನ್ಸ್ಟಾಗ್ರಾಂ ಖಾತೆಯನ್ನೂ ಹ್ಯಾಕ್ ಮಾಡ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಇಂದು ಪ್ರಧಾನಿ ಮಹಿಳೆಯರ ಎದುರು ತಲೆಬಾಗಿದ್ದಾರೆ. ನಿಮ್ಮ ಶಕ್ತಿಯನ್ನು ಅರಿತುಕೊಳ್ಳಿ ಎಂದು ನಾನು ಮಹಿಳೆಯರಿಗೆ ಹೇಳಿದ್ದೆ. ಇದೇ ಕಾರಣಕ್ಕಾಗಿ ಇಂದು ಸರ್ಕಾರವೇ ಮಹಿಳೆಯರ ಎದುರು ತಲೆಬಾಗಿದೆ. ಈ ಮೊದಲು ಮಹಿಳೆಯರ ಸಬಲೀಕರಣಕ್ಕೆ ಬಿಜೆಪಿ ಸರ್ಕಾರ ಏನನ್ನೂ ಮಾಡಿಲ್ಲ. ಆದರೆ ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸರ್ಕಾರವು ಮಹಿಳೆಯರ ಎದುರು ತಲೆ ಬಾಗುತ್ತಿದೆ. ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ ಎಂದು ವ್ಯಂಗ್ಯವಾಡಿದರು.