ನೊಯ್ಡಾದಲ್ಲಿ ಕಾರು ವಾಶ್ ಮಾಡುವ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಉದ್ಯೋಗದಿಂದ ವಜಾ ಮಾಡಿದ್ದಕ್ಕೆ ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾನೆ. ನೋಯ್ಡಾದ ಸೆಕ್ಟರ್ 113 ಪೊಲೀಸ್ ಠಾಣಾ ವ್ಯಾಪ್ತಿಯ ಸೊಸೈಟಿಯೊಂದರಲ್ಲಿ ಈ ಯುವಕ 15 ಕಾರುಗಳನ್ನು ಆಸಿಡ್‌ನಿಂದ ತೊಳೆದಿದ್ದಾನೆ.
ಇದರಿಂದ ಕಾರುಗಳು ಸಂಪೂರ್ಣ ಹಾನಿಗೊಳಗಾಗಿವೆ. ಕಾರಿನ ಪೇಂಟ್ ಮತ್ತು ಗಾಜುಗಳಿಗೆ ಹಾನಿಯಾಗಿದೆ. ನೋಯ್ಡಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕಾರು ಡ್ಯಾಮೇಜ್ ಆಗಿರುವ ಬಗ್ಗೆ ಹಲವರು ಪೊಲೀಸರಿಗೆ ದೂರು ನೀಡಿದ್ದರು.
ಮಾರ್ಚ್ 15 ರಂದು ಬೆಳಗ್ಗೆ ಕಚೇರಿಗೆ ತೆರಳುವ ವೇಳೆ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹೊರತೆಗೆಯಲು ಬಂದಾಗ ಆಸಿಡ್ ಎರಚಿರುವುದು ಬೆಳಕಿಗೆ ಬಂದಿದೆ. ಕ್ಲೀನರ್ ಮಾಡಿರುವ ಈ ಸೇಡಿನ ಕೆಲಸದಿಂದ 15 ಕಾರುಗಳು ಹಾಳಾಗಿವೆ.
ಸಂತ್ರಸ್ತರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಯುವಕ ಇದೇ ಸೊಸೈಟಿಯಲ್ಲಿ ಕಾರು ತೊಳೆಯುವ ಕೆಲಸ ಮಾಡುತ್ತಿದ್ದ. ಸಿಸಿ ಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ರಾಮ್ ರಾಜ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮೂಲತಃ ಹರ್ದೋಯಿ ನಿವಾಸಿಯಾಗಿರುವ ರಾಮರಾಜ್‌ನನ್ನು ಕೆಲ ದಿನಗಳ ಹಿಂದಷ್ಟೆ ಕೆಲಸದಿಂದ ತೆಗೆದು ಹಾಕಲಾಗಿತ್ತು.