ನಾವೆಲ್ಲ ದುಡಿಯೋದು ಎರಡು ಹೊತ್ತಿನ ಊಟಕ್ಕಾಗಿ. ಎಷ್ಟೋ ಮಂದಿ ತುತ್ತು ಅನ್ನಕ್ಕಾಗಿಯೇ ಬೆವರು ಮಾತ್ರವಲ್ಲ ರಕ್ತವನ್ನೂ ಸುರಿಸಬೇಕಾಗಿ ಬರುತ್ತದೆ. ಇಡೀ ಕುಟುಂಬದ ಜವಾಬ್ಧಾರಿ ಹೊತ್ತವನು ಊಟಕ್ಕಾಗಿಯೇ ಶ್ರಮಪಡಬೇಕಾಗುತ್ತದೆ.
ಆದ್ರೆ ಇಷ್ಟೆಲ್ಲಾ ಕಷ್ಟಪಟ್ಟರೂ ಊಟವೇ ಸಿಗದೇ ಇದ್ದರೆ ಹೇಗಿರಬಹುದು ಹೇಳಿ ? ಇನ್ನು ಕೆಲವೇ ವರ್ಷಗಳಲ್ಲಿ ಅಂಥದ್ದೇ ಸ್ಥಿತಿ ನಿರ್ಮಾಣವಾಗಲಿದೆಯಂತೆ. ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿರುವ ಆಹಾರ ಪದಾರ್ಥಗಳೆಲ್ಲ ಸಂಪೂರ್ಣ ಖಾಲಿಯಾಗಲಿವೆ ಅನ್ನೋದು ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ. ಆಗ ನೂರು ಇನ್ನೂರು ಹಾಗಿರಲಿ, ಕೋಟ್ಯಾಂತರ ರೂಪಾಯಿ ಇದ್ದರೂ ನಿಮಗೆ ಒಂದೊಪ್ಪತ್ತಿನ ಊಟ ಸಿಗುವುದು ಕಷ್ಟವಾಗಬಹುದು.
2050ರ ವೇಳೆಗೆ ಆಹಾರ ಸಂಪೂರ್ಣ ಖಾಲಿ !
ಸಾಮಾಜಿಕ ಮತ್ತು ಆರ್ಥಿಕ ದತ್ತಾಂಶಗಳ ಮೇಲೆ ನಿಗಾ ಇಡುವ ಸಂಸ್ಥೆಯಾದ ʼದಿ ವರ್ಲ್ಡ್ ಕೌಂಟ್ʼ ವರದಿಯ ಪ್ರಕಾರ, ಇಡೀ ಪ್ರಪಂಚದಲ್ಲಿ ಇಂತಹ ಆಹಾರ ಬಿಕ್ಕಟ್ಟು ಸೃಷ್ಟಿಯಾಗಲಿದೆ. 2050ರ ವೇಳೆಗೆ ಇಡೀ ಜಗತ್ತಿನಲ್ಲಿ ಆಹಾರ ಧಾನ್ಯಗಳು ಖಾಲಿಯಾಗಲಿವೆ. ದಿ ವರ್ಲ್ಡ್ ಕೌಂಟ್ ತನ್ನ ವೆಬ್‌ಸೈಟ್‌ನಲ್ಲಿ ಧಾನ್ಯಗಳ ಅಂಕಿ-ಅಂಶಗಳನ್ನು ಕೂಡ ಹಾಕಿದೆ. ಈ ಸಮೀಕ್ಷೆಯ ಪ್ರಕಾರ ಭೂಮಿ ಮೇಲಿನ ಧಾನ್ಯಗಳೆಲ್ಲ ಖರ್ಚಾಗಿ ಹೋಗಲು ಕೇವಲ 27 ವರ್ಷಗಳು ಬಾಕಿ ಇವೆ.
ಶೇ.70ರಷ್ಟು ಹೆಚ್ಚಾಗಲಿದೆ ಆಹಾರಕ್ಕೆ ಬೇಡಿಕೆ
2050ರ ವೇಳೆಗೆ ವಿಶ್ವದ ಜನಸಂಖ್ಯೆಯು ಸಾವಿರ ಕೋಟಿ ದಾಟಲಿದೆ ಎಂದು ದಿ ವರ್ಲ್ಡ್ ಕೌಂಟ್ ತನ್ನ ವರದಿಯಲ್ಲಿ ತಿಳಿಸಿದೆ. ಹಾಗಾಗಿ 2050ರ ವೇಳೆಗೆ ಆಹಾರಕ್ಕೆ ಬೇಡಿಕೆ ಕೂಡ 2017ಕ್ಕೆ ಹೋಲಿಸಿದ್ರೆ ಶೇ.70ರಷ್ಟು ಹೆಚ್ಚಾಗಲಿದೆ. ಭೂಮಿಯು ಪ್ರತಿ ವರ್ಷ 7500 ಮಿಲಿಯನ್ ಟನ್ ಫಲವತ್ತಾದ ಮಣ್ಣನ್ನು ಕಳೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಕಳೆದ 40 ವರ್ಷಗಳಲ್ಲಿ, ಒಟ್ಟು ಭೂಮಿಯ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ.
ಆಹಾರದ ಕೊರತೆಗೆ ಇದು ಪ್ರಮುಖ ಕಾರಣ. ಮುಂದಿನ 40 ವರ್ಷಗಳಲ್ಲಿ ಭೂಮಿ ಮೇಲಿರುವ ಜೀವಿಗಳ ಆಹಾರದ ಅಗತ್ಯವನ್ನು ಪೂರೈಸಲು, ಕಳೆದ 8 ಸಾವಿರ ವರ್ಷಗಳಲ್ಲಿ ಮಾಡದಿರುವಷ್ಟು ಧಾನ್ಯವನ್ನು ಉತ್ಪಾದಿಸಬೇಕಾಗುತ್ತದೆ. ಆದ್ರೆ ಫಲವತ್ತಾದ ಭೂಮಿಯೇ ಕಡಿಮೆಯಾಗ್ತಿರೋದ್ರಿಂದ ಇದು ಅಸಾಧ್ಯದ ಮಾತು. ಧಾನ್ಯ ಖಾಲಿಯಾದಾಗ ಮಾಂಸವನ್ನು ತಿನ್ನುವ ಆಯ್ಕೆ ಕೂಡ ಮಾನವರ ಮುಂದಿಲ್ಲ. ಯಾಕಂದ್ರೆ ಮಾಂಸವನ್ನು ತಯಾರಿಸಲು ಹೆಚ್ಚು ಶಕ್ತಿ ಬೇಕು.
2030ರ ವೇಳೆಗೆ ಅಕ್ಕಿಯ ಬೆಲೆ ಶೇ.130ರಷ್ಟು ಮತ್ತು ಮೆಕ್ಕೆಜೋಳದ ಬೆಲೆ ಶೇ.180 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ದಿ ವರ್ಲ್ಡ್ ಕೌಂಟ್ ಭವಿಷ್ಯ ನುಡಿದಿದೆ. ಆಹಾರ ಮತ್ತು ನೀರಿಗಾಗಿ ಯುದ್ಧವೇ ನಡೆದ್ರೂ ಅಚ್ಚರಿಯಿಲ್ಲ. ಒಂದ್ಕಡೆ ಆಹಾರ ಧಾನ್ಯಗಳ ಕೊರತೆಯಾದ್ರೆ ಮತ್ತೊಂದ್ಕಡೆ ನೀರು ಮತ್ತು ಆಹಾರವನ್ನು ವ್ಯರ್ಥ ಮಾಡಿದ್ರೆ ಇನ್ನೂ ಕಠಿಣ ಪರಿಸ್ಥಿತಿಗಳು ಎದುರಾಗಬಹುದು.
ಕಳೆದ ವರ್ಷ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ 2019ರಲ್ಲಿ ವಿಶ್ವಾದ್ಯಂತ 93 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಆಹಾರವನ್ನು ವ್ಯರ್ಥ ಮಾಡಲಾಗಿದೆ. ವೇಸ್ಟ್ ಮಾಡಿರೋ ಆಹಾರ ಒಟ್ಟಾರೆ ಲಭ್ಯವಿರೋ ಆಹಾರದ ಶೇ.17ರಷ್ಟಿದೆ. ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿ ವರ್ಷ 121 ಕೆಜಿ ಆಹಾರವನ್ನು ವ್ಯರ್ಥ ಮಾಡುತ್ತಾನೆ. ಇನ್ಮೇಲಾದ್ರೂ ಆಹಾರ ಮತ್ತು ನೀರನ್ನು ಪೋಲು ಮಾಡದೇ ರಕ್ಷಿಸಿದ್ರೆ ಮಾತ್ರ ಜನರು ಬದುಕಿ ಉಳಿಯಬಹುದು.