ದೋಸೆ ರುಚಿಯೇ ಬೇರೆ. ಪ್ರತಿ ದಿನ ಬೇರೆ ಬೇರೆ ವೆರೈಟಿ ದೋಸೆ ಮಾಡಬಹುದು. ಕಡಲೆ ಹಿಟ್ಟಿನಿಂದ ರುಚಿ ದೋಸೆ ತಯಾರಿಸಬಹುದು.
ಕಡಲೆ ಹಿಟ್ಟಿನ ದೋಸೆಗೆ ಬೇಕಾಗುವ ಪದಾರ್ಥ :
ಒಂದು ಕಪ್ ಕಡಲೆಹಿಟ್ಟು, ಅರ್ಧ ಚಮಚ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು. ಸ್ವಲ್ಪ ನೀರು. ಅರ್ಧ ಚಮಚ ಮೆಣಸಿನ ಪುಡಿ, ಅರ್ಧ ಚಮಚ ಚಾಟ್ ಮಸಾಲಾ, ಒಂದು ಟೊಮೊಟೊ, ಒಂದು ಈರುಳ್ಳಿ, ಸ್ವಲ್ಪ ಪನ್ನೀರ್, ಕತ್ತರಿಸಿದ ಕೊತ್ತಂಬರಿ ಸೊಪ್ಪು.
ಕಡಲೆ ಹಿಟ್ಟಿನ ದೋಸೆ ಮಾಡುವ ವಿಧಾನ :
ಒಂದು ಪಾತ್ರೆಗೆ ಕಡಲೆ ಹಿಟ್ಟನ್ನು ಹಾಕಿ. ಅದಕ್ಕೆ ಅರಿಶಿನ, ಉಪ್ಪನ್ನು ಹಾಕಿ. ಇದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ದೋಸೆ ಮಿಶ್ರಣದ ಹದಕ್ಕೆ ತನ್ನಿ. ಎರಡು ನಿಮಿಷಗಳ ಕಾಲ ಮಿಶ್ರಣವನ್ನು ಕೈ ಆಡಿಸಿ. ದೋಸೆ ಪ್ಯಾನ್ ಬಿಸಿ ಮಾಡಿ.
ಸ್ವಲ್ಪ ಬಿಸಿಯಾದ ಮೇಲೆ ದೋಸೆ ಮಾಡಿ, ಅದ್ರ ಮೇಲೆ ಬೆಣ್ಣೆಯನ್ನು ಸವರಿ. ರುಚಿ ಹೆಚ್ಚಿಸಲು ಸ್ವಲ್ಪ ಸ್ವಲ್ಪ ಮೆಣಸಿನ ಪುಡಿ, ಚಾಟ್ ಮಸಾಲಾ ಹಾಕಿ. ಉಪ್ಪನ್ನು ಕೂಡ ಹಾಕಿ. ಮಸಾಲೆ ಹಾಕಿದ ನಂತ್ರ ಕತ್ತರಿಸಿದ ಈರುಳ್ಳಿಯನ್ನು ಅದ್ರ ಮೇಲೆ ಹಾಕಿ. ನಂತ್ರ ಟೊಮೊಟೊ ಹಾಗೂ ತುರಿದ ಪನ್ನೀಸ್ ಹಾಕಿ. ಬೇಕಾದ್ರೆ ಶಿಮ್ಲಾ ಮೆಣಸು ಹಾಕಬಹುದು. ಇದ್ರ ಮೇಲೆ ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಹಾಕಿ ಬೇಯಿಸಿ. ದೋಸೆ ಗರಿ ಗರಿಯಾದ್ಮೇಲೆ ತೆಗೆಯಿರಿ.