ಸಾಮಾನ್ಯವಾಗಿ ಕೆಲವು ಪೆನ್ನುಗಳು ತನ್ನ ಕ್ಯಾಪ್ ನಲ್ಲಿ ರಂಧ್ರಗಳನ್ನು ಹೊಂದಿರುವುದನ್ನು ನೀವು ಗಮನಿಸಿರಬಹುದು. ಪೆನ್ ಕ್ಯಾಪ್ ಗಳಲ್ಲಿ ರಂಧ್ರಗಳು ಇರೋ ಕಾರಣಗಳೇನಿರಬಹುದು ಎಂದು ಎಂದಾದ್ರೂ ಊಹಿಸಿದ್ದೀರಾ..?
ಇದೀಗ ಬಾಲ್‌ಪಾಯಿಂಟ್ ಪೆನ್ನುಗಳು ತಮ್ಮ ಕ್ಯಾಪ್‌ಗಳಲ್ಲಿ ಏಕೆ ರಂಧ್ರಗಳನ್ನು ಹೊಂದಿವೆ ಎಂಬುದನ್ನು ವಿವರಿಸಲಾಗಿದೆ. ರಂಧ್ರಗಳು ಪೆನ್ನಿನಲ್ಲಿನ ಒತ್ತಡವನ್ನು ಸಮೀಕರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಇದರಿಂದಾಗಿ ಕ್ಯಾಪ್ ತೆರೆಯಲು ಸುಲಭವಾಗುತ್ತದೆ. ಆದರೆ, ಅನೇಕ ಪೆನ್ ಕ್ಯಾಪ್‌ಗಳನ್ನು ಸ್ಕ್ರೂ ಮಾಡಬಹುದಾಗಿದೆ.
ರಂಧ್ರಗಳು ನಿಬ್‌ನಲ್ಲಿನ ಶಾಯಿಯನ್ನು ಒಣಗಲು ಕಾರಣವಾಗುತ್ತೆ ಎಂದು ಕೆಲವರು ಭಾವಿಸುತ್ತಾರೆ. ಈ ಕಾರಣವು ಭಾಗಶಃ ನಿಜವಾಗಿದ್ದರೂ, ಇದು ರಂಧ್ರಗಳನ್ನು ಮಾಡಿರೋ ಏಕೈಕ ಉದ್ದೇಶವೇನಲ್ಲ. ಸುರಕ್ಷತಾ ಕ್ರಮವಾಗಿ ಪೆನ್‌ಗೆ ವೈಶಿಷ್ಟ್ಯವನ್ನು ನೀಡಲಾಗಿದೆ. ಕೆಲವರಿಗೆ ಪೆನ್ ಕ್ಯಾಪ್ ಅನ್ನು ಅಗಿಯುವ ಖಾಯಿಲೆಯಿರುತ್ತದೆ. ಇದರಿಂದ ಆಕಸ್ಮಾತ್ ಆಗಿ ಅದನ್ನು ನುಂಗಿದ್ರೆ, ಉಸಿರುಗಟ್ಟಿ ಸಾಯುವುದನ್ನು ಇದು ತಡೆಯುತ್ತದೆ.
ಹಳೆಯ ಪೆನ್ ತಯಾರಕರಲ್ಲಿ ಒಂದಾದ ಬಿಐಸಿ, ತಮ್ಮ ಪೆನ್ ಕ್ಯಾಪ್‌ಗಳ ಮೇಲ್ಭಾಗದಲ್ಲಿ ಒಂದು ರಂಧ್ರವನ್ನು ಸೇರಿಸಿ ಅದನ್ನು ಜೀವ ಉಳಿಸುವ ವೈಶಿಷ್ಟ್ಯವನ್ನಾಗಿ ಮಾಡಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಕ್ಯಾಪ್ ಅನ್ನು ನುಂಗಿದರೆ ಮತ್ತು ಅದು ಗಾಳಿಯ ಕೊಳವೆಯಲ್ಲಿ ಸಿಲುಕಿಕೊಂಡರೆ, ರಂಧ್ರವು ಗಾಳಿಯ ಹರಿವನ್ನು ನಿರ್ವಹಿಸುತ್ತದೆ ಮತ್ತು ವ್ಯಕ್ತಿಯು ಉಸಿರಾಡಲು ಅನುವು ಮಾಡಿಕೊಡುತ್ತದೆ.
ಆಕಸ್ಮಿಕವಾಗಿ ಪೆನ್ ಕ್ಯಾಪ್ ಸೇವಿಸಿ ಶಾಲಾ ಮಕ್ಕಳು ಮತ್ತು ಪುಟ್ಟ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿವೆ. 2018ರಲ್ಲಿ ಆಂಧ್ರಪ್ರದೇಶದ 8 ವರ್ಷದ ಬಾಲಕ ಪೆನ್ ಕ್ಯಾಪ್ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದ್ದ.
ಕ್ಯಾಪ್‌ನಲ್ಲಿರುವ ಸುರಕ್ಷತಾ ರಂಧ್ರಗಳು ನೀವು ಅದನ್ನು ನುಂಗುವ ಸಂದರ್ಭದಲ್ಲಿ ನಿಮ್ಮನ್ನು ಉಳಿಸಬಹುದಾದರೂ, ಅದು ಕಾರ್ಯನಿರ್ವಹಿಸುತ್ತದೆಯೇ ಎಂದು ಪರಿಶೀಲಿಸಲು ಮಾತ್ರ ಮುಂದಾಗಬೇಡಿ. ಕಂಪನಿಗಳು ಕೂಡ ಅದನ್ನು ಪ್ರಯತ್ನಿಸಲು ಸಲಹೆ ನೀಡುವುದಿಲ್ಲ.