ಬದಲಾಗುತ್ತಿರುವ ಹವಾಮಾನದಿಂದ ಚಿಕ್ಕ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಮಕ್ಕಳಿಗೆ ಕೆಮ್ಮು ಪ್ರಾರಂಭವಾದ ತಕ್ಷಣ ನಾವು ಕಾಫ್ ಸಿರಪ್ ಕುಡಿಸುತ್ತೇವೆ. ಆದರೆ ಕೆಮ್ಮಿನ ಸಿರಪ್ ತುಂಬಾ ಅಪಾಯಕಾರಿ. ಮುಂಬೈನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೆಮ್ಮಿನ ಸಿರಪ್ ಕುಡಿಯುತ್ತಿದ್ದಂತೆ ಎರಡೂವರೆ ವರ್ಷದ ಮಗುವಿನ ಹೃದಯ ಬಡಿತವೇ ನಿಂತು ಹೋದ ಘಟನೆ ನಡೆದಿದೆ. ಔಷಧಿ ನೀಡಿದ ಸ್ವಲ್ಪ ಹೊತ್ತಿನಲ್ಲೇ ಮಗುವಿನ ಹೃದಯ ಬಡಿತ ನಿಂತುಹೋಯಿತು.
ಮುಂಬೈ ಮೂಲದ ಪೇಯ್ನ್ ಮ್ಯಾನೇಜ್‌ಮೆಂಟ್ ಸ್ಪೆಷಲಿಸ್ಟ್ ಟಿಲು ಮಂಗೇಶ್ಕರ್ (ಡಾ. ಟಿಲು ಮಂಗೇಶಕರ್) ಅವರ ಎರಡೂವರೆ ವರ್ಷದ ಮೊಮ್ಮಗ ಡಿಸೆಂಬರ್ 15 ರಂದು ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದ. ಆತನ ತಾಯಿ ಮಗುವಿಗೆ ಕೆಮ್ಮಿನ ಸಿರಪ್ ನೀಡಿದ್ದಾರೆ. ಆದರೆ ಔಷಧಿ ನೀಡಿದ 20 ನಿಮಿಷಗಳ ನಂತರ ಇದ್ದಕ್ಕಿದ್ದಂತೆ ಮಗು ಕುಸಿದು ಬಿದ್ದಿದೆ, ಆತನ ಹೃದಯ ಬಡಿತವೇ ನಿಂತು ಹೋಗಿದೆ. ಹೃದಯ ಸ್ತಂಭನದ ನಂತರ ತಾಯಿ ತಕ್ಷಣವೇ ಮಗುವನ್ನು ಮುಂಬೈನ ಹಾಜಿ ಅಲಿ ಪ್ರದೇಶದಲ್ಲಿರುವ ಎಸ್‌ಆರ್‌ಸಿಸಿ ಆಸ್ಪತ್ರೆಗೆ ಕರೆದೊಯ್ದರು.
ಮಗುವಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ನೀಡಲಾಯ್ತು. ಸುಮಾರು 20 ನಿಮಿಷಗಳ ಬಳಿಕ ಮಗು ಕಣ್ಣು ತೆರೆದಿದೆ. ಮಗುವಿನ ರಕ್ತದೊತ್ತಡ ಮತ್ತು ಹೃದಯ ಬಡಿತ ಪ್ರಾರಂಭವಾಗಿದೆ. ಈ ಘಟನೆಯ ನಂತರ ಅನೇಕ ಪರೀಕ್ಷೆಗಳನ್ನು ಮಾಡಲಾಯ್ತು. ಆದರೆ ಕೆಮ್ಮಿನ ಔಷಧಿ ಹೊರತುಪಡಿಸಿ ಯಾವುದೇ ಕಾರಣ ಕಂಡುಬಂದಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಕ್ಲೋರ್ಫೆನಿರಮೈನ್ ಮತ್ತು ಡೆಕ್ಸ್ಟ್ರೋಮೆಥೋರ್ಫಾನ್ ಸಂಯುಕ್ತಗಳ ಸಂಯೋಜನೆ ಇರುವುದು ಕಂಡುಬಂದಿದೆ. ನಿಯಮಗಳ ಪ್ರಕಾರ ಇದನ್ನು ನಾಲ್ಕು ವರ್ಷದೊಳಗಿನ ಮಕ್ಕಳಿಗೆ ನೀಡುವಂತಿಲ್ಲ. ಆದರೆ ಈ ಔಷಧದ ಮೇಲೆ ಅಂತಹ ಯಾವುದೇ ಲೇಬಲ್ ಇರಲಿಲ್ಲ ಮತ್ತು ವೈದ್ಯರು ಅದನ್ನು ಮಕ್ಕಳಿಗೆ ನೀಡುತ್ತಿದ್ದಾರೆ.
ಮಗುವಿನ ಹೃದಯ ಬಡಿತ ನಿಂತಿದ್ದಕ್ಕೂ ಕೆಮ್ಮಿನ ಸಿರಪ್‌ಗೂ ಸಂಬಂಧವಿದೆ ಅನ್ನೋದನ್ನು ಸಾಬೀತುಪಡಿಸುವುದು ಸುಲಭವಲ್ಲ ಎನ್ನುತ್ತಾರೆ ವೈದ್ಯರು. ವೈದ್ಯರೇ ಹೇಳುವ ಪ್ರಕಾರ ಕೆಲವೊಂದು ಕೆಮ್ಮಿನ ಸಿರಪ್‌ಗಳ ಸೇವನೆಯಿಂದ ಹೃದಯದ ತೊಂದರೆ ಕಂಡುಬಂದಿದೆ.