ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿಯ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಧು ಬಂಗಾರಪ್ಪ ಅವರಿಗೆ ಸೆ. 24 ರಂದು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಪ್ರೆಸ್ ಟ್ರಸ್ಟ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧು ಬಂಗಾರಪ್ಪ ನೇಮಕವಾದ ನಂತರ ಪ್ರಥಮ ಬಾರಿಗೆ ಶಿವಮೊಗ್ಗಕ್ಕೆ ಬರಲಿದ್ದಾರೆ. ಅವರನ್ನು ಬೆಳಗ್ಗೆ 10.30 ಕ್ಕೆ ಎಂ.ಆರ್.ಎಸ್. ವೃತ್ತದಿಂದ ಬೈಕ್ ರ್ಯಾಲಿಯ ಮೂಲಕ ಮೆರವಣಿಗೆಯೊಂದಿಗೆ ಪಕ್ಷದ ಕಚೇರಿಗೆ ಕರೆತರಲಾಗುವುದು. ನಂತರ ಅವರನ್ನು ಅಭಿನಂದಿಸಲಾಗುವುದು ಎಂದರು.
ಮಧು ಬಂಗಾರಪ್ಪ ಅವರು ನಾಳೆಯಿಂದಲೇ ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೂ ಪ್ರವಾಸ ಕೈಗೊಂಡಿದ್ದಾರೆ. ಪಕ್ಷದ ಸಂಘಟನೆಯ ಜೊತೆಗೆ ಚುನಾವಣಾ ತಯಾರಿಯನ್ನೂ ನಡೆಸಲಿದ್ದಾರೆ. ಅವರ ನೇಮಕ ಪಕ್ಷಕ್ಕೆ ಬಲ ತಂದಿದೆ ಎಂದರು.
ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ ಮಾತನಾಡಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ಯಾವುದೇ ಆದ್ಯತೆ ಸಿಕ್ಕಿಲ್ಲ. ಹಿಂದುಳಿದವರ ಸಂಘಟನೆಯ ಜೊತೆಗೆ ಕಾಂಗ್ರೆಸ್ ಅನ್ನು ಗೆಲ್ಲಿಸುವ ನಿಟ್ಟಿನತ್ತ ಮಧು ಬಂಗಾರಪ್ಪ ಹೊಸ ಹೆಜ್ಜೆ ಹಾಕಲಿದ್ದಾರೆ ಎಂದರು.
ಈ ಅಭಿನಂದನಾ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ, ಕಾಗೋಡು ತಿಮ್ಮಪ್ಪ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.