ಕೆನಡಾದ ಪಶ್ಚಿಮ ಪ್ರಾಂತ್ಯದಲ್ಲಿರೋ ಅಲ್ಬರ್ಟಾದಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಸುಂಟರಗಾಳಿ ನೆಲಕ್ಕೆ ಅಪ್ಪಳಿಸಿದಾಗ ಆಲಿಕಲ್ಲು ಮಳೆಯಾಗಿದೆ. ಅದೃಷ್ಟವಶಾತ್ ಹಠಾತ್ ಚಂಡಮಾರುತದಿಂದಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ. ಗಂಭೀರವಾಗಿ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.
ಟೆನಿಸ್ ಬಾಲ್ ಗಾತ್ರದ ಆಲಿಕಲ್ಲುಗಳು ಇದ್ದಕ್ಕಿದ್ದಂತೆ ಸುರಿದಿವೆ. ಸುಮಾರು 15 ರಿಂದ 20 ನಿಮಿಷಗಳ ಕಾಲ ಬಿರುಗಾಳಿ ಬೀಸಿದ್ದು, ವಾಹನಗಳಿಗೆ ಹೆಚ್ಚಿನ ಹಾನಿಯಾಗಿದೆ. ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ ಪ್ರಕಾರ ಆಲಿಕಲ್ಲು ಬಿದ್ದಿದ್ದರಿಂದ 34 ವಾಹನಗಳು ಜಖಂಗೊಂಡಿವೆ. ಮೂರು ಕಡೆಗಳಲ್ಲಿ ಅಪಘಾತ ಕೂಡ ಸಂಭವಿಸಿದೆ.
ಚಂಡಮಾರುತದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಜನರು ಈ ವಿಲಕ್ಷಣ ಹವಾಮಾನದ ಫೋಟೋ ಮತ್ತು ವಿಡಿಯೋಗಳನ್ನು ಟ್ವಿಟ್ಟರ್‌ನಲ್ಲಿ ಹರಿಬಿಟ್ಟಿದ್ದಾರೆ. ಕಾರಿನೊಳಗಿದ್ದವರೆಲ್ಲ ತಮ್ಮ ಕೈ ಹಾಗೂ ಪರ್ಸ್‌ಗಳಿಂದ ತಮ್ಮ ತಲೆಯನ್ನು ಮುಚ್ಚಿಕೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಆಲಿಕಲ್ಲುಗಳು ಕಾರಿನ ವಿಂಡ್‌ಶೀಲ್ಡ್‌ಗಳನ್ನು ಛಿದ್ರಗೊಳಿಸಿವೆ. ಈ ವಿಡಿಯೋ ಸಹ ವೈರಲ್ ಆಗಿದೆ. ಪ್ಯಾಟ್ ಬೂಮರ್ ಎಂಬ ಪರಿಸರ ಪ್ರೇಮಿ ಆಲಿಕಲ್ಲುಗಳನ್ನು ಅಳೆದು ಆ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾನೆ.