ಅಮರಾವತಿ: ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ನಟ ಸಂಜಯ್ ದತ್ ಅವರ ಕಾಂಬಿನೇಷನ್ ಕೆಜಿಎಫ್ 2 ಚಿತ್ರ ಇದೀಗ ಬಾಕ್ಸ್ ಆಫೀಸನ್ನು ಧೂಳೆಬ್ಬಿಸಿ ಈಗ ವಿಶ್ವಾದ್ಯಂತ 1200 ಕೋಟಿ ಗಳಿಸಲು ಸಜ್ಜಾಗುತ್ತಿದೆ. ಚಿತ್ರದಲ್ಲಿನ ರಾಕಿ ಭಾಯ್ ಪಾತ್ರ ನಿಜಕ್ಕೂ ಒಂದು ಕ್ರೇಜ್ ಸೃಷ್ಟಿ ಮಾಡಿದೆ. ಕೆಜಿಎಫ್ ಚಾಪ್ಟರ್ 2 ಭಾರತದಲ್ಲಿ ಬಿಡುಗಡೆಯಾದ ಎರಡನೇ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ.
ಇಡೀ ಜಗತ್ತು ಕೆಜಿಎಫ್ 2 ಅನ್ನು ಸಂಭ್ರಮಿಸುತ್ತಿರುವಾಗ ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೌದು, ಆಂಧ್ರಪ್ರದೇಶದ ಏಲೂರಿನ ಚಿತ್ರಮಂದಿರದಲ್ಲಿ ಮೇ 9 ರಂದು ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ ನಡೆದಿದೆ.
ಸಾವಿನ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಹಿಸಿದ್ದು, ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಕ್ಷಣವೇ ತನಿಖೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಕೆಲವು ದಿನಗಳ ಹಿಂದೆಯಷ್ಟೇ ಸಿನಿಮಾ ವೀಕ್ಷಿಸುತ್ತಿದ್ದ ವಸಂತ್ ಕುಮಾರ್ ಎಂಬ ವ್ಯಕ್ತಿಯ ಮೇಲೆ ಮತ್ತೊಬ್ಬ ವ್ಯಕ್ತಿ ಗುಂಡಿನ ದಾಳಿ ನಡೆಸಿದ ಘಟನೆಯೂ ಜರುಗಿತ್ತು. ಈತ ಸಿನಿಮಾ ಮಂದಿರದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಬಳಿಕ ತಿಳಿದು ಬಂದಿತ್ತು.