ವಾರಾಂತ್ಯದಲ್ಲಿ ಆಕಾಶವು ರಕ್ತ ಕೆಂಪು ಬಣ್ಣಕ್ಕೆ ತಿರುಗಿದ್ದು, ಜನರಲ್ಲಿ ಭೀತಿ ಮೂಡಿಸಿರುವ ಘಟನೆ ಚೀನಾದ ಝೌಶಾನ್ ನಗರದಲ್ಲಿ ನಡೆದಿದೆ.
ಬಂದರು ನಗರದಲ್ಲಿ ಆಕಾಶವು ದಟ್ಟವಾದ ಮಂಜಿನ ಪದರಗಳ ಜೊತೆಗೆ ಕಡುಗೆಂಪು ಬಣ್ಣದಲ್ಲಿ ಕಾಣಿಸಿಕೊಂಡಿದೆ. ಜನರು ತಮ್ಮ ಮನೆಗಳು, ಬಾಲ್ಕನಿಗಳು ಮತ್ತು ಬೀದಿಗಳಿಂದ ಆಕಾಶವು ಕಡುಗೆಂಪು ಕೆಂಪು ಬಣ್ಣಕ್ಕೆ ತಿರುಗಿದ್ದನ್ನು ಕಂಡು ಗಾಬರಿಯಾಗಿದ್ದಾರೆ.
ಈ ವಿದ್ಯಮಾನದ ವಿಡಿಯೋಗಳು ಮತ್ತು ಫೋಟೋಗಳು ಚೀನೀ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಸಿನಾ ಮತ್ತು ವೈಬೊದಲ್ಲಿ ಕಾಣಿಸಿಕೊಂಡಿದೆ. ಇದು 150 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿವೆ. ದೇಶದಲ್ಲಿ ಕೋವಿಡ್ -19 ಅನ್ನು ಚೀನಾ ಸರ್ಕಾರ ನಿರ್ವಹಿಸಿದ ಮೇಲೆ ಅನೇಕ ಬಳಕೆದಾರರು ಈ ವಿದ್ಯಮಾನವನ್ನು ಕೆಟ್ಟ ಶಕುನ ಎಂದು ಕರೆದಿದ್ದಾರೆ.
ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಅಪರೂಪದ ವಿದ್ಯಮಾನ ಕಂಡು ಜನರು ಭೀತಿಗೊಂಡಿದ್ದಾರೆ. ಮಾಧ್ಯಮಗಳು, ರಕ್ತ-ಕೆಂಪು ಆಕಾಶವು ನೈಸರ್ಗಿಕ ಬೆಳಕಿನ ವಕ್ರೀಭವನದ ಪರಿಣಾಮದಿಂದ ಈ ರೀತಿ ಉಂಟಾಗಿದೆ. ಇದು ಮಾನವ ನಿರ್ಮಿತ ಪರಿಣಾಮವಲ್ಲ ಎಂದು ವಿವರಿಸಿದೆ.
ವರದಿಯ ಪ್ರಕಾರ, ಹವಾಮಾನ ಪರಿಸ್ಥಿತಿಗಳು ಉತ್ತಮವಾದಾಗ, ವಾತಾವರಣದಲ್ಲಿನ ಹೆಚ್ಚಿನ ನೀರು ಏರೋಸಾಲ್‌ಗಳನ್ನು ರೂಪಿಸುತ್ತದೆ. ಇದು ಮೀನುಗಾರಿಕಾ ದೋಣಿಗಳ ಬೆಳಕನ್ನು ವಕ್ರೀಭವನಗೊಳಿಸುತ್ತದೆ ಮತ್ತು ಚದುರಿಸುತ್ತದೆ. ಈ ವೇಳೆ ಆಕಾಶವು ಕೆಂಬಣ್ಣಕ್ಕೆ ತಿರುಗಲು ಕಾರಣವಾಗುತ್ತದೆ ಎಂದು ಝೌಶನ್ ಹವಾಮಾನ ಬ್ಯೂರೋ ವಿವರಿಸಿದೆ.