ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಬಿಬಿಎಂಪಿ ಚಿಂತನೆ ನಡೆಸಿದೆ.
ಕೆಐಎ ಹೊರಭಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವಂತೆ ಖಾಸಗಿ ಕ್ಯಾಬ್ ಸಂಘಟನೆಗಳು ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ತೆರೆಯಲು ಚಿಂತನೆ ನಡೆದಿದೆ.
ವಿಮಾನ ನಿಲ್ದಾಣದ ಹೊರಗೆ ಒಂದು ಅಥವಾ ಎರಡು ಇಂದಿರಾ ಕ್ಯಾಂಟೀನ್ ತೆರೆಯುವ ಬಗ್ಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆಯುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತರು, ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ. ಪ್ರಸ್ತುತ ನಿಯಮದ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್ ತೆರೆಯಬೇಕು. ವಿಮಾನ ನಿಲ್ದಾಣ ಬಳಿ ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯುವುದರಿಂದ ಸ್ಪೆಷಲ್ ಕೇಸ್ ಎಂದು ಪರಿಗಣಿಸಿ ಇಂದಿರಾ ಕ್ಯಾಂಟೀನ್ ತೆರೆಯಬಹುದು.
ಕೆಲ ಆಸ್ಪತ್ರೆಗಳ ಹೊರ ಭಾಗದಲ್ಲೂ ಇಂದಿರಾ ಕ್ಯಾಂಟೀನ್ ತೆರೆಯುವಂತೆ ಒತ್ತಾಯ ಕೇಳಿಬಂದಿದೆ. ಹೆಚ್ಚಿನ ಜನರು ಸೇರುವ ಕಡೆ ಇಂದಿರಾ ಕ್ಯಾಂಟೀನ್ ತೆರೆದರೆ ಅನುಕೂಲವಾಗಲಿದೆ. ಈ ಬಗ್ಗೆ ಸಚಿವರು ಚರ್ಚಿಸಿದರೆ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಆಹಾರ ಸಿಗುತ್ತದೆಯಾದರೂ ದುಬಾರಿ ಬೆಲೆಯಿಂದಾಗಿ ಕ್ಯಾಬ್ ಚಾಲಕರು, ಸಾಮಾನ್ಯ ಪ್ರಯಾಣಿಕರು ಖರೀದಿ ಮಾಡುವುದು ಕಷ್ಟಸಾಧ್ಯ. ಹಾಗಾಗಿ ಇಂದಿರಾ ಕ್ಯಾಂಟೀನ್ ಆರಂಭವಾದರೆ ಕ್ಯಾಬ್ ಚಾಲಕರು ಮಾತ್ರವಲ್ಲ, ಇತರ ಪ್ರಯಾಣಿಕರಿಗೂ ಕೈಗೆಟುಕುವ ದರದಲ್ಲಿ ಉತ್ತಮ ಆಹಾರ ಸಿಗುವಂತಾಗುತ್ತದೆ.