ಸೌತೆಕಾಯಿ ಬಹುತೇಕ ಎಲ್ಲರ ಫೇವರಿಟ್. ಬೇಸಿಗೆಯಲ್ಲಿ ಉಪ್ಪು, ಖಾರ ಹಾಕಿಕೊಂಡು ಸವಿಯುವವರೇ ಹೆಚ್ಚು. ತಿನ್ನೋದಕ್ಕೆ ಬಹಳ ರುಚಿಕರವಾಗಿರೋ ಸೌತೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ನೀರಿನಂಶ ಹೇರಳವಾಗಿದ್ದು ಅದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಸೌತೆಕಾಯಿಯಿಂದ ಅನೇಕ ಇತರ ಆರೋಗ್ಯ ಪ್ರಯೋಜನಗಳು ಕೂಡ ಇವೆ.
ಸೌತೆಕಾಯಿಯನ್ನು ತಿನ್ನುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಕೂದಲಿನ ಆರೋಗ್ಯಕ್ಕೂ ಇದು ಬಹಳ ಪ್ರಯೋಜನಕಾರಿ. ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಸೌತೆಕಾಯಿ ನಿವಾರಿಸುತ್ತದೆ. ನೀವು ಇದನ್ನು ಕೂದಲಿಗೆ ಹಲವಾರು ರೀತಿಯಲ್ಲಿ ಬಳಸಬಹುದು.
ಸೌತೆಕಾಯಿ ರಸದಿಂದ ಮಸಾಜ್
ಕೂದಲಿನ ಬೆಳವಣಿಗೆ ಮತ್ತು ಹೊಳಪಿಗೆ ಸೌತೆಕಾಯಿ ರಸವನ್ನು ಬಳಸಿ. ಇದು ನಿಮ್ಮ ಕೂದಲಿಗೆ ಅತ್ಯಂತ ಪರಿಣಾಮಕಾರಿ ಮನೆಮದ್ದು. ನಿಮ್ಮ ಕೂದಲಿನ ಉದ್ದಕ್ಕೆ ಅನುಗುಣವಾಗಿ ಒಂದು ಅಥವಾ 2 ಸೌತೆಕಾಯಿಗಳನ್ನು ತೆಗೆದುಕೊಳ್ಳಿ. ಇದನ್ನು ಮಿಕ್ಸರ್ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಸೌತೆಕಾಯಿ ರಸವನ್ನು ಬೌಲ್ಗೆ ಹಾಕಿಕೊಂಡು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ, ಸ್ವಲ್ಪ ಹೊತ್ತು ಹಾಗೇ ಬಿಡಿ. ನಂತರ ವೃತ್ತಾಕಾರದ ಚಲನೆಯಲ್ಲಿ ಚೆನ್ನಾಗಿ ಮಸಾಜ್ ಮಾಡಿ. ಅದಾದ ಬಳಿಕ ಕೂದಲನ್ನು ನೀರಿನಿಂದ ತೊಳೆಯಿರಿ. ಕೂದಲನ್ನು ತೊಳೆಯುವಾಗ ಶಾಂಪೂ ಬಳಸಬೇಡಿ.
ಸೌತೆಕಾಯಿ ರಸ ಮತ್ತು ನಿಂಬೆ ರಸ
ಸೌತೆಕಾಯಿ ರಸ ಮತ್ತು ನಿಂಬೆ ರಸವನ್ನು ಬಳಸುವುದರಿಂದ ತಲೆಹೊಟ್ಟು ನಿವಾರಿಸಬಹುದು. ಅರ್ಧ ಸೌತೆಕಾಯಿಯ ರಸವನ್ನು ತೆಗೆದುಕೊಳ್ಳಿ. ಇದಕ್ಕೆ 2 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಿ. 30 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ.