ನಮ್ಮ ಮುಖ ಎಷ್ಟೇ ಸುಂದರವಾಗಿದ್ದರೂ ಕೂದಲು ಚೆನ್ನಾಗಿಲ್ಲದಿದ್ರೆ ಅಂದವನ್ನೇ ಹಾಳುಗೆಡವಿಬಿಡುತ್ತದೆ. ದುರ್ಬಲ ಮತ್ತು ಒಣ ಕೂದಲು ನಮ್ಮ ಸೌಂದರ್ಯಕ್ಕೆ ಕುತ್ತು ತರುತ್ತದೆ. ಇಂತಹ ಶುಷ್ಕ ಮತ್ತು ನಿರ್ಜೀವ ಕೂದಲಿನಿಂದ ಪ್ರತಿಯೊಬ್ಬರೂ ತೊಂದರೆಗೊಳಗಾಗುತ್ತಾರೆ.
ಬಲವಾದ ಮತ್ತು ಸುಂದರವಾದ ಕೂದಲಿಗಾಗಿ ಬಗೆಬಗೆಯ ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಆದ್ರೆ ಕೂದಲಿಗೆ ಪೋಷಕಾಂಶದ ಕೊರತೆ, ತಲೆಹೊಟ್ಟು, ಕೂದಲು ಉದುರುವಿಕೆ, ಬಿಳಿ ಕೂದಲು ಹೀಗೆ ನಾನಾ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ.
ಇದಕ್ಕೆಲ್ಲ ಕಾರಣ ಪೌಷ್ಠಿಕಾಂಶದ ಕೊರತೆ. ಈ ಎಲ್ಲಾ ಸಮಸ್ಯೆಗಳಿಗೆ ತುಪ್ಪದಲ್ಲಿ ಪರಿಹಾರವಿದೆ. ಕೂದಲಿನ ಶುಷ್ಕತೆ, ತುರಿಕೆ ಮತ್ತು ಉದುರುವಿಕೆಯನ್ನು ತುಪ್ಪದ ಬಳಕೆಯಿಂದ ಹೋಗಲಾಡಿಸಬಹುದು. ಕೂದಲಿನ ಪೋಷಣೆಗೆ ಮಸಾಜ್ ಮಾಡುವುದು ಬಹಳ ಮುಖ್ಯ.
ತಲೆಸ್ನಾನ ಮಾಡುವ ಮೊದಲು ಕೂದಲಿಗೆ ತುಪ್ಪದಿಂದ ಮಸಾಜ್ ಮಾಡಬಹುದು. ಬೆಚ್ಚಗಿನ ತುಪ್ಪವನ್ನು ಕೂದಲಿನ ಬೇರುಗಳಿಗೆ ಅನ್ವಯಿಸಿ. ಇದರಿಂದ ಕೂದಲಿಗೆ ಬಲ ಬರುತ್ತದೆ ಮತ್ತು ತಲೆಹೊಟ್ಟು ದೂರವಾಗುತ್ತದೆ.
ನಿಮ್ಮ ಕೂದಲು ಒಣಗಿದ್ದರೆ ತುಪ್ಪ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಹಚ್ಚುವುದರಿಂದ ಶುಷ್ಕತೆ ದೂರವಾಗುತ್ತದೆ. ತುಪ್ಪದಲ್ಲಿ ಸ್ವಲ್ಪ ಜೇನುತುಪ್ಪ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ಅದನ್ನು 1 ಗಂಟೆ ಬಿಡಿ. ನಂತರ ತಲೆಸ್ನಾನ ಮಾಡಿ. ತೊಳೆದ ನಂತರ ಕೂದಲು ತೇವಾಂಶವನ್ನು ಪಡೆಯುತ್ತದೆ ಮತ್ತು ಅವುಗಳಲ್ಲಿ ಹೊಳಪು ಬರುತ್ತದೆ.
ಕೂದಲಿನ ಬೇರುಗಳಲ್ಲಿ ತುರಿಕೆ ಸಮಸ್ಯೆ ಸಾಮಾನ್ಯವಾಗಿದೆ. ಇದಕ್ಕೆ ಡ್ಯಾಂಡ್ರಫ್ ಕೂಡ ಕಾರಣವಾಗಿರಬಹುದು. ಬಾದಾಮಿ ಎಣ್ಣೆಯನ್ನು ತುಪ್ಪದಲ್ಲಿ ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ಕೂದಲನ್ನು ತೊಳೆಯುವ ಮುನ್ನ ಸ್ವಲ್ಪ ರೋಸ್ ವಾಟರ್ ಹಾಕಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ತುರಿಕೆ ಸಮಸ್ಯೆ ನಿವಾರಣೆಯಾಗುತ್ತದೆ.
ಉದ್ದ ಕೂದಲು ಪಡೆಯುವ ಆಸೆಯಿದ್ದರೆ ನಿಯಮಿತವಾಗಿ ತೆಂಗಿನೆಣ್ಣೆಯೊಂದಿಗೆ ತುಪ್ಪ ಬೆರೆಸಿ ಲೇಪಿಸಿ. ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಬಲಗೊಳ್ಳುತ್ತದೆ. ಕೂದಲಿನ ಬೆಳವಣಿಗೆ ಮರಳಿ ಪ್ರಾರಂಭಿಸುತ್ತದೆ.