ಈ ಹಿಂದೆ ಪ್ರತಿಯೊಂದು ಊರಿನಲ್ಲಿ ಗರಡಿ ಮನೆಗಳಿದ್ದು, ಬಹುತೇಕ ಯುವಕರು ತಾಲೀಮು ನಡೆಸುತ್ತಿದ್ದರು. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಗರಡಿ ಮನೆಗೆ ನಿತ್ಯ ಯುವಕರು ಹೋಗುತ್ತಿದ್ದರು. ಆದರೆ ಕ್ರಮೇಣ ಗರಡಿ ಮನೆಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಇದ್ದ ಗರಡಿ ಮನೆಗಳು ಪಾಳು ಬೀಳತೊಡಗಿದವು.
ಇದರ ಮಧ್ಯೆ ಜಿಮ್ ಸಂಸ್ಕೃತಿ ಆರಂಭವಾಗಿದ್ದು, ಫೋರ್ ಪ್ಯಾಕ್ ಸಿಕ್ಸ್ ಪ್ಯಾಕ್ ಗುಂಗಿನಲ್ಲಿ ಯುವ ಜನತೆ ಇವುಗಳ ಹಿಂದೆ ಬಿದ್ದಿದ್ದು, ಕುಸ್ತಿ ಕೇವಲ ಹಬ್ಬಗಳ ಸಂದರ್ಭಕ್ಕೆ ಸೀಮಿತವಾಗಿದ್ದಂತಿತ್ತು. ಇದ್ದುದರಲ್ಲೇ ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗದಲ್ಲಿ ಕುಸ್ತಿಪಟುಗಳು ತಮ್ಮ ಪ್ರತಿಭೆ ತೋರಿಸುತ್ತಿದ್ದರು.
ಇದರ ಮಧ್ಯೆ ಕುಸ್ತಿಪಟುಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದ್ದು, ರಾಜ್ಯದ ಪ್ರತಿ ಗರಡಿ ಮನೆ ಅಭಿವೃದ್ಧಿಗಾಗಿ 10 ಲಕ್ಷ ರೂಪಾಯಿ ಮಂಜೂರು ಮಾಡಲಾಗುವುದು ಎಂದು ತಿಳಿದುಬಂದಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಮೈಸೂರಿನಲ್ಲಿ ದಸರಾ ನಾಡ ಕುಸ್ತಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದ್ದು, ಗರಡಿ ಮನೆಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಇಲಾಖೆಯಿಂದ ಈ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.