ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರ ಸಂಕ್ರಾಂತಿ ಗಿಫ್ಟ್ ನೀಡಲು ಮುಂದಾಗಿದೆ. ಐವತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲು ಸಿದ್ಧತೆ ನಡೆಸಲಾಗಿದ್ದು, ಈ ಪೈಕಿ 15,000 ರೂಪಾಯಿ ಸಹಾಯಧನ ಲಭ್ಯವಾಗಲಿದೆ.
ಕಮ್ಮಾರಿಕೆ, ಆಭರಣ ತಯಾರಿಕೆ, ಶ್ರೀಗಂಧ ಕೆತ್ತನೆ, ಬುಟ್ಟಿ ಎಣೆಯುವವರು, ಚನ್ನಪಟ್ಟಣದ ಗೊಂಬೆ ತಯಾರಕರು, ನವಲಗುಂದ ರತ್ನಗಂಬಳಿ, ಕುಂಬಾರಿಕೆ, ಲೋಹದ ಕರಕುಶಲ, ಚಾಪೆ ಎಣೆಯುವವರು, ಶಿಲ್ಪಿ ಸೇರಿದಂತೆ ಒಟ್ಟು 22 ವರ್ಗಗಳಿಗೆ ಈ ಸೌಲಭ್ಯ ಸಿಗಲಿದ್ದು, 50,000 ರೂಪಾಯಿ ಆರ್ಥಿಕ ನೆರವಿನಲ್ಲಿ 15 ಸಾವಿರ ರೂಪಾಯಿ ಸಹಾಯಧನ ಹೊರತುಪಡಿಸಿ ಉಳಿದ 35,000 ರೂಪಾಯಿಗಳನ್ನು ಬ್ಯಾಂಕ್ ಗಳ ಮೂಲಕ ಸಾಲ ಕೊಡಿಸಲಾಗುತ್ತದೆ.
ಸಾಲ ಪಡೆದರೆ ಕುಶಲಕರ್ಮಿಗಳಿಗೆ ಜವಾಬ್ದಾರಿ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ 35,000 ರೂಪಾಯಿಗಳನ್ನು ಬ್ಯಾಂಕುಗಳ ಮೂಲಕ ಕೊಡಿಸಲಾಗುತ್ತಿದ್ದು ಅದನ್ನು ತೀರಿಸಬೇಕಾಗುತ್ತದೆ. 18 ವರ್ಷ ತುಂಬಿದ ಕುಶಲಕರ್ಮಿ ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಬ್ಯಾಂಕ್ ಸಾಲಕ್ಕೆ ಒಮ್ಮೆ ಮಾತ್ರ ಸಹಾಯಧನ ಸಿಗುತ್ತದೆ. ಆನ್ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದ್ದು, ಪಿಡಿಒಗಳಿಂದ ಕುಶಲಕರ್ಮಿ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಸದ್ಯದಲ್ಲೇ ಈ ಕುರಿತು ವಿವರವಾದ ಮಾಹಿತಿ ಹೊರ ಬೀಳಲಿದೆ.