ಬೆಂಗಳೂರು: ಈ ಹಿಂದಿನ ಪಠ್ಯ ಪರಿಷ್ಕರಣೆ ಸಮಿತಿ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಟೀಕೆಗೆ ತಿರುಗೇಟು ನೀಡಿರುವ ಬರಗೂರು ರಾಮಚಂದ್ರಪ್ಪ, ಕುವೆಂಪು ಬಿಟ್ಟು ಕನ್ನಡ ಪಠ್ಯ ರಚಿಸಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ನಾವು ಪರಿಷ್ಕರಣೆ ಮಾಡಿದ ಸಂದರ್ಭದಲ್ಲಿ ಗಾಂಧಿ, ಅಂಬೇಡ್ಕರ್, ಮದಕರಿ ನಾಯಕ, ಕೆಂಪೇಗೌಡ ಪಠ್ಯ ಕೈಬಿಟ್ಟಿದ್ದೇವೆ, ಕುವೆಂಪು ಪಾಠ ಕೈಬಿಟ್ಟಿದ್ದೇವೆ ಎಂದು ಹೇಳಿದ್ದಾರೆ ಇದು ಸುಳ್ಳು. ಕುವೆಂಪು ಪಾಠ ಹತ್ತನೇ ತರಗತಿಯ ಕನ್ನಡ ವಿಷಯದಲ್ಲಿದೆ. ಏಳನೇ ತರಗತಿಯಲ್ಲಿಯೂ ಇದೆ.
ಗಾಂಧಿಜೀ ಪಾಠ 7ನೇ ತರಗತಿಯ ಹಾಗೂ 10ನೇ ತರಗತಿಯ ಸಮಾಜ ವಿಜ್ಞಾನ ಭಾಗ 2ರಲ್ಲಿದೆ. ಅಂಬೇಡ್ಕರ್ ಕುರಿತು 8ನೇ ತರಗತಿಯಲ್ಲಿದೆ, 10ನೇ ತರಗತಿಯಲ್ಲಿಯೂ ಇದೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಬಗ್ಗೆ 6ನೇ ತರಗತಿ ಹಾಗೂ ಮದಕರಿ ನಾಯಕ, ನಾಡಪ್ರಭು, ಪಾಳೇಗಾರರ ಬಗ್ಗೆ 5ನೇ ತರಗತಿಯಲ್ಲಿ ಪ್ರತ್ಯೇಕ ಪಾಠಗಳಿವೆ. ರಾಣಿ ಅಬ್ಬಕ್ಕ ಬಗ್ಗೆ 7ನೇ ತರಗತಿಯಲ್ಲಿದೆ. ಕೆಂಪೇಗೌಡರ ವಂಶಸ್ಥರ ಬಗ್ಗೆ ಲೇಖನಗಳೂ ಇವೆ. ಹೀಗಿರುವಾಗ ಕಡಿಮೆ ಮಾಹಿತಿ ಎಂಬುದು ಹೇಗಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಒಡೆಯರ್ ಬಗ್ಗೆ ಕಡಿಮೆ ಮಾಹಿತಿ ಇದೆ ಎಂದು ಸಚಿವರು ಹೇಳಿದ್ದಾರೆ. ಕಡಿಮೆ ಇದ್ದರೆ ಮರು ಪರಿಷ್ಕರಣೆ ಮಾಡಿ ಹೆಚ್ಚಿನ ವಿವರ ಸೇರಿಸಬಹುದು. ವಾಸ್ತವದ ಪ್ರಕಾರ ಮೈಸೂರು ಒಡೆಯರ್ ಎಂಬ ಪ್ರತ್ಯೇಕ ಪಾಠವೇ ಸಮಾಜ ವಿಜ್ಞಾನ ಭಾಗದಲ್ಲಿ ಬರೆಯಲಾಗಿದೆ. ಸಕಾರಾತ್ಮಕ ಅಂಶಗಳನ್ನು ನಾವು ಮಕ್ಕಳಿಗೆ ಕೊಡಬೇಕು ಹೊರತು ಪರ-ವಿರೋಧ ಚರ್ಚೆ ವಾಗ್ವಾದವಲ್ಲ. ಶಿಕ್ಷಣ ಕ್ಷೇತ್ರ ಕಲುಷಿತವಾಗಬಾರದು, ಇರುವ ವಿವಾದವನ್ನು ಅಂತ್ಯಮಾಡುವ ಬಗ್ಗೆ ಶಿಕ್ಷಣ ಸಚಿವರು ಗಮನ ಹರಿಸಲಿ ಎಂದು ಹೇಳಿದರು.