ಬೆಂಗಳೂರು: ನಾನು ಕುವೆಂಪು ಬಗ್ಗೆ ಯಾವುದೇ ಅಪಮಾನ ಮಾಡಿಲ್ಲ, ನಾಡಗೀತೆಗೆ ಅಪಮಾನ ಮಾಡಿದವರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಿಳಿಸಿದ್ದಾರೆ.
ಕೆಲ ದಿನಗಳಿಂದ ರಾಷ್ಟ್ರಕವಿ ಕುವೆಂಪು ಅವರ ವಿಚಾರಗಳನ್ನು ಮುಂದಿಟ್ಟುಕೊಂಡು ಒಂದಿಷ್ಟು ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಅವುಗಳಲ್ಲಿ ಕುವೆಂಪು ಬರೆದ ನಾಡಗೀತೆಗೆ ನಾನು ಅವಮಾನ ಮಾಡಿದ್ದೇನೆ ಎಂಬ ಕುರಿತಾಗಿಯೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹೆಸರು ಹಾಗೂ ಚಿತ್ರಗಳನ್ನು ತೋರಿಸುವ ಪೊಸ್ಟರ್ ಗಳು ಓಡಾಡುತ್ತಿವೆ. ನಾನು ಕುವೆಂಪು ಸಾಹಿತ್ಯವನ್ನು ಅತ್ಯಂತ ಗೌರವ, ಪ್ರೀತಿಯಿಂದ ಓದಿಕೊಂಡು ಬಂದವನು. ಮಹಾಕವಿಗೆ ನಾನು ಅಗೌರವ ಸೂಚಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2017ರಲ್ಲಿ ಸಚಿವರೊಬ್ಬರು ಕನ್ನಡ ಶಾಲೆಯಲ್ಲಿ ಅರೇಬಿಕ್ ಭಾಷೆ ಕಲಿಸುತ್ತೇವೆ ಎಂಬ ಹೇಳಿಕೆ ಕೊಟ್ಟಿದ್ದರು. ಆಗ ಜನಾಕ್ರೋಶ ವ್ಯಕ್ತವಾಗಿತ್ತು. ಆ ವೇಳೆ ಯಾರೋ ಒಬ್ಬರು ನಾಡಗೀತೆ ಧಾಟಿಯಲ್ಲಿ ನಾಲ್ಕು ಸಾಲುಗಳನ್ನು ಬರೆದು ಸರ್ಕಾರದ ನಡೆ ಪ್ರಶ್ನಿಸಿದ್ದರು. ವಾಟ್ಸಪ್ ನಲ್ಲಿ ಬಂದಿದ್ದ ಆ ಮೆಸೇಜನ್ನು ನಾನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದೆ. ಇದು ವಾಟ್ಸಪ್ ನಲ್ಲಿ ಬಂದ ಬರಹ ಎಂದು ಸ್ಪಷ್ಟವಾಗಿ ಬರೆದಿದ್ದೆ. ಆದರೆ ಕೆಲವರು ಈ ಪೋಸ್ಟ್ ನ್ನು ತಮಗೆ ಬೇಕಾದಂತೆ ತಿರುಚಿ ನನ್ನ ವಿರುದ್ಧ ಆರೋಪ ಮಾಡಿ ನಾಡಗೀತೆ, ಕುವೆಂಪು ಅವರಿಗೆ ಅವಮಾನ ಎಂದು ಬಿಂಬಿಸಿದರು. ಪೊಲೀಸರು ವಿಚಾರಣೆಗೆ ಕರೆದಾಗ ನಾನು ಅವರಿಗೆ ಸತ್ಯಾಂಶವನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರಕರಣ ಕೈಬಿಟ್ಟಿದ್ದರು. ಈಗ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಬಂದಾಗ ಕೆಲ ವಿರೋಧಿಗಳು ಹಳೆಯ ವಿಚಾರವನ್ನು ಮತ್ತೆ ಕೆದಕಿ ವಿವಾದ ಮಾಡುತ್ತಿರುವುದು ವಿಷಾದಕರ ಎಂದು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ನಾನು ಕುವೆಂಪು ಅವರಿಗೆ ನಾಡಗೀತೆಗೆ ಅವಮಾನ ಮಾಡುವ ಯೋಚನೆಯನ್ನೂ ಮಾಡಿಲ್ಲ, ಮಾಡುವುದೂ ಇಲ್ಲ. ನಾಡಗೀತೆಗೆ ಅವಮಾನ ಮಾಡಿದ್ದು ಯಾರೋ ಅವರಿಗೆ ಶಿಕ್ಷೆಯಾಗಲಿ. ಅವರನ್ನು ಪತ್ತೆ ಹಚ್ಚುವ ಕೆಲಸ ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸಿದ್ದಾರೆ.