ಕುಮ್ಕಿ, ಕಾನು, ಬಾಣೆ, ಸೊಪ್ಪಿನ ಬೆಟ್ಟದಲ್ಲಿ ಬಡ ರೈತಾಪಿ ವರ್ಗದವರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದೀಗ ರಾಜ್ಯ ಸರ್ಕಾರ ಅವರುಗಳಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಅರ್ಹ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ತೀರ್ಮಾನಿಸಲಾಗಿದ್ದು, ಈ ಕುರಿತಂತೆ ಅಭಿಪ್ರಾಯ ನೀಡಲು ಸಂಪುಟ ಉಪ ಸಮಿತಿ, ಕಾನೂನು ಇಲಾಖೆಗೆ ಸೂಚಿಸಿದೆ.
ಮಂಗಳವಾರದಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆದಿದ್ದು, ಈ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಡ ರೈತರು ಕಳೆದ 60 – 70 ವರ್ಷಗಳಿಂದ ಸರ್ಕಾರಿ ಭೂಮಿ, ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಅರಣ್ಯೀಕರಣ ನಿರ್ಮಾಣ ಸಾಧ್ಯವಾಗಿಲ್ಲ ಎಂದರು.
ಹೀಗಾಗಿ ಇಂತಹ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ತೀರ್ಮಾನಿಸಲಾಗಿದ್ದು, ಆದರೆ ಹೊಸದಾಗಿ ಇದಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಿಲ್ಲ. ಆದರೆ ಈಗಾಗಲೇ ಅರ್ಜಿ ಸಲ್ಲಿಸಿದವರು ಹಾಗೂ ತಿರಸ್ಕೃತ ಅರ್ಜಿಗಳನ್ನು ಪರಿಗಣಿಸಿ ಮಂಜೂರು ಮಾಡಲಾಗುತ್ತದೆ. ಇದಕ್ಕಾಗಿ ಕಾನೂನಿಗೆ ಸೂಕ್ತ ತಿದ್ದುಪಡಿ ತರುವ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಕೇಳಲಾಗಿದೆ ಎಂದರು.