ಇನ್ಮುಂದೆ ದಕ್ಷಿಣ ದೆಹಲಿಯಲ್ಲಿ ಮದುವೆಗಳು ಅಥವಾ ಇತರ ಕಾರ್ಯಕ್ರಮಗಳ ಬಜೆಟ್ ಹೆಚ್ಚಿಸಬೇಕಾಗಿದೆ. ಏಕೆಂದರೆ ಈ ಭಾಗದ ಜನರ ಅಚ್ಚುಮೆಚ್ಚಿನ ‘ಘೋಡಿ ಬಾಗಿ’ ಅಥವಾ ಕುದುರೆ ಗಾಡಿಗಳ ದರಗಳು ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕೆ ಕಾರಣ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಕುದುರೆ ಮತ್ತು ಕುದುರೆ ಗಾಡಿಗಳಿಗೆ ಮಾಲೀಕರು ಥರ್ಡ್ ಪಾರ್ಟಿ ಇನ್ಶುರೆನ್ಸ್ ಪಡೆಯುವುದನ್ನ ಕಡ್ಡಾಯಗೊಳಿಸಿದೆ.
ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಂಸಿ) ಸ್ಥಾಯಿ ಸಮಿತಿಯು ಗುರುವಾರ ಈ ಕುರಿತ ಪ್ರಸ್ತಾವನೆಯನ್ನು ಅಂಗೀಕರಿಸಿದೆ. ವಿಮಾ ಕಂಪನಿಗಳು, ಒಬ್ಬ ವ್ಯಾಪಾರಿಗೆ ಪರವಾನಗಿಗಾಗಿ 7,000 ರೂ. ಮತ್ತು ಮದುವೆ ಉದ್ದೇಶಕ್ಕಾಗಿ ಕುದುರೆ ಎಳೆಯುವ ರಥವನ್ನು ನವೀಕರಿಸಲು ಸುಮಾರು 2,000 ರೂ. ಅಷ್ಟು ಬೆಲೆಯನ್ನು ನಿಗದಿಪಡಿಸಿವೆ. ಈ ಹಿಂದೆ ದೆಹಲಿಯಲ್ಲಿ ಅಪಘಾತಗಳು ಮತ್ತು ಇತರ ಅಹಿತಕರ ಘಟನೆಗಳ ವರದಿಯಾದ ಕಾರಣ ಇದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುದುರೆ ಗಾಡಿಯಿಂದ ಯಾವುದೇ ಅವಘಡ, ಅಪಘಾತ ಅಥವಾ ಸಾವು ಸಂಭವಿಸಿದಲ್ಲಿ, ಪರವಾನಗಿದಾರರ ಜವಾಬ್ದಾರಿಯ ಬಗ್ಗೆ ಪ್ರಸ್ತುತ ನಿಯಮಗಳಲ್ಲಿ ಏನನ್ನೂ ಉಲ್ಲೇಖಿಸಲಾಗಿಲ್ಲ. ಹೊಸ ನಿಯಮಗಳ ಪ್ರಕಾರ, ಅರ್ಜಿದಾರರು ಯಾವುದೇ ಬಳಕೆದಾರರಿಗೆ ಜೀವಹಾನಿ ಅಥವಾ ಗಾಯವನ್ನು ಉಂಟುಮಾಡುವ ಅಪಘಾತಗಳಿಗೆ ಕಾರಣವಾದಾಗ ತಾನೇ ಜವಾಬ್ದಾರಿ ವಹಿಸುತ್ತೇನೆ ಎಂದು ಕಾರ್ಪೋರೇಷನ್ ಜೊತೆ ಒಪ್ಪಂದ ಮಾಡಿಕೊಳ್ಳಬೇಕೆಂಬ ಕಾಯ್ದೆ ಇದೆ ಎಂದು ತಿಳಿದು ಬಂದಿದೆ.
ಈ ಪ್ರಸ್ತಾಪವನ್ನು ವಿರೋಧ ಪಕ್ಷ, ಅಂದರೆ ಎಎಪಿ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ಆಡಳಿತದ ಕಾರ್ಪೋರೇಷನ್, ತನ್ನ ಉದ್ಯೋಗಿಗಳ ವಿಮೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಕುದುರೆಗಳ ವಿಮೆಯನ್ನು ಕಡ್ಡಾಯಗೊಳಿಸುತ್ತಿದೆ ಎಂದಿದೆ. ಈ ನಿರ್ಧಾರದಿಂದ ಬೆಲೆ ಹೆಚ್ಚಳವಾಗಲಿದೆ ಎಂದು ಆಪ್ ಪಕ್ಷದ ಕೌನ್ಸಿಲರ್ ಕಿಡಿ ಕಾರಿದ್ದಾರೆ.